
ಕನ್ನಡಪ್ರಭ ವಾರ್ತೆ, ತುಮಕೂರು
ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರಿನ ಮಟ್ಟ ಹಾಗೂ ನೀರು ಹರಿವಿನ ಕುರಿತು ಅಧಿಕಾರಿಗಳಿಂದ ಡಿಸಿಎಂ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ್, ಬುಗುಡನಹಳ್ಳಿ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹೇಮಾವತಿ ಜಲಾಶಯದಲ್ಲಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಮುಂದಿನ ಮೂರೂವರೆ ತಿಂಗಳ ಕುಡಿಯುವ ನೀರಿನ ಅಗತ್ಯವಿದೆ ಎಂದು ಮನವಿ ಮಾಡಿದ್ದರಿಂದ ನೀರು ಬಿಡಲಾಗಿದೆ ಎಂದು ತಿಳಿಸಿದರು.ಮತ್ತೆ ಡಿಸೆಂಬರ್ ವೇಳೆಗೆ ನೀರು ಅಗತ್ಯವಾಗಲಿದ್ದು, ಕೆರೆಯನ್ನು ತುಂಬಿಸಿಕೊಂಡರೆ ಮುಂದಿನ ಮೇ–ಜೂನ್‌ವರೆಗೆ ನಗರದ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಹೇಮಾವತಿ ನೀರು ಬಂದಿರುವುದು ಸಂತಸದ ಸಂಗತಿ ಎಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ ಮಾತನಾಡಿ, ಹೇಮಾವತಿ ಜಲಾಶಯದಿಂದ ನೀರು ಬಿಡಲಾಗಿದ್ದು, ಆಗಸ್ಟ್ 27ರವರೆಗೆ ನೀರು ಹರಿಸುವ ಸಾಧ್ಯತೆಯಿದೆ. ಸುಮಾರು 100 ಎಂಸಿಎಫ್‌ಟಿ ನೀರು ಬಂದರೂ ತುಮಕೂರು ನಗರದ ಜನರಿಗೆ ಜನವರಿವರೆಗೆ ಯಾವುದೇ ಆತಂಕವಿಲ್ಲದೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಡಿಸಿಎಂ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು..