ಸರ್ಕಾರ ಹೈನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತುಮಕೂರು ತಾಲೂಕು ಸಹಾಯಕ ನಿರ್ದೇಶಕ ಡಾ. ವಿ.ಸಿ. ರುದ್ರಪ್ರಸಾದ್, ಸರ್ಕಾರ 2025-26 ನೇ ಸಾಲಿನಲ್ಲಿ ಫಲಾನುಭವಿಗಳಿಗೆ 23ಮೇವು ಕತ್ತರಿಸುವ ಯಂತ್ರ, 68 ರಬ್ಬರ್‌ ನೆಲಹಾಸು, ಐದು ಹಾಲು ಕರೆಯುವ ಯಂತ್ರ, ಡೈರಿಯ ಸಹಕಾರದಲ್ಲಿ ಮೇವಿನ ಕಿಟ್ ವಿತರಿಸಾಗುತ್ತಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಬರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ. ಹಾಗಾಗಿ ಹೈನುಗಾರರ ನೆರವಿಗೆ ತುಮಕೂರು ಹಾಲು ಒಕ್ಕೂಟ ಹಲವಾರು ಕ್ರಮಗಳನ್ನು ಪಶುಪಾಲನೆ ಮತ್ತು ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಕೈಗೊಂಡಿದೆ ಎಂದು ತುಮುಲ್‌ನ ನಿರ್ದೇಶಕ ನಂಜೇಗೌಡ ತಿಳಿಸಿದ್ದಾರೆ.

ನಗರದ ಕಾಲ್‌ಟ್ಯಾಕ್ಸ್ ಸರ್ಕಲ್‌ನಲ್ಲಿರುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಶು ಇಲಾಖೆ ಮತ್ತು ಡೈರಿಯ ಒತ್ತಾಸೆಯ ಫಲವಾಗಿ ತುಮುಲ್‌ಗೆ ಹಾಲು ಸಂಗ್ರಹ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ತುಮಕೂರು ತಾಲೂಕು ಒಂದರಲ್ಲಿಯೇ 1 ಲಕ್ಷ ಲೀಟರ್ ಬರುತ್ತಿದ್ದ ಹಾಲು, ಪ್ರಸ್ತುತ 1.42 ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ. ಜಿಡ್ಡಿನ ಅಂಶದ ಆಧಾರದಲ್ಲಿ ರೈತರು ಒಂದು ಲೀಟರ್‌ಗೆ ಗರಿಷ್ಠ 50 ರು ಪಡೆಯುತ್ತಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಅರ್ಥಿಕ ಸಬಲೀಕರಣಕ್ಕೆ ಸಹಾಯವಾಗಿದೆ ಎಂದು ಹೇಳಿದರು.

ಹೈನುಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ ಬಾರಿ 15 ಸಾವಿರ ರಬ್ಬರ್‌ ಮ್ಯಾಟ್‌ ವಿತರಿಸಲಾಗಿತ್ತು. ತುಮಕೂರು ತಾಲೂಕಿನ 1870 ರೈತರಿಗೆ ಮ್ಯಾಟ್ ನೀಡಿದ್ದು, ಈ ಬಾರಿ 25 ಸಾವಿರ ಮ್ಯಾಟ್ ವಿತರಿಸಲು ತುಮುಲ್ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 60 ಮಿಲ್ಕಿಂಗ್ ಯೂನಿಟ್ ವಿತರಿಸುವ ಗುರಿ ಇದೆ. ಇದರಿಂದ ರಾಸುಗಳಿಗೆ ಬರುವ ಕೆಚ್ಚಲು ಬಾವು ಮತ್ತು ಗಿಣ್ಣುಹುಣ್ಣು ನಿವಾರಣೆಯಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್ ಮಾತನಾಡಿ, ಸರ್ಕಾರ ಹೈನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತುಮಕೂರು ತಾಲೂಕು ಸಹಾಯಕ ನಿರ್ದೇಶಕ ಡಾ. ವಿ.ಸಿ. ರುದ್ರಪ್ರಸಾದ್, ಸರ್ಕಾರ 2025-26 ನೇ ಸಾಲಿನಲ್ಲಿ ಫಲಾನುಭವಿಗಳಿಗೆ 23ಮೇವು ಕತ್ತರಿಸುವ ಯಂತ್ರ, 68 ರಬ್ಬರ್‌ ನೆಲಹಾಸು, ಐದು ಹಾಲು ಕರೆಯುವ ಯಂತ್ರ, ಡೈರಿಯ ಸಹಕಾರದಲ್ಲಿ ಮೇವಿನ ಕಿಟ್ ವಿತರಿಸಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಎಚ್.ಎಂ. ಶಿವಪ್ರಸಾದ್ ವಹಿಸಿದ್ದರು. ಈ ವೇಳೆ ಕುರಿ ನಿಗಮದ ಸಹಾಯಕ ನಿರ್ದೇಶಕ ಡಾ.ಮೋಹನ್ ಸೇರಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.