ಈ ವೇಳೆ ರೈಲ್ವೆ ಪ್ರಯಾಣಿಕರ ಕುಟುಂಬದ ಎಸ್‌ಎಸ್‌ಎಲ್‌ಸಿ ಮತ್ತು ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಜ್ಯೋತಿಗಣೇಶ್ ಪುರಸ್ಕಾರ ವಿತರಿಸಿ, ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ರೈಲ್ವೆ ಪ್ರಮಾಣಿಕರ ವೇದಿಕೆಯಿಂದ ಆರೋಗ್ಯ ತಪಾಸಣೆ, ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಿದ್ಧಗಂಗಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿ.ಎಸ್.ಎಸ್ ಐ ಅಂಡ್ ಇಎನ್‌ಟಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ರೈಲ್ವೆ ಪ್ರಯಾಣಿಕರ ಆರೋಗ್ಯ ತಪಾಸಣೆ ನೀಡಿ, ಅಗತ್ಯವಿರುವವರಿಗೆ ಉಚಿತ ಔಷಧಿ ವಿತರಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ದೇಶದಲ್ಲಿ ರೈಲ್ವೆ ಇಲಾಖೆಯಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಿ, ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳು ದೊರೆಯುತ್ತಿವೆ. ವಿ. ಸೋಮಣ್ಣ ಅವರು ರೈಲ್ವೆ ಸಚಿವರಾದ ನಂತರ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರು.ಗಳ ರೈಲ್ವೆ ಯೋಜನೆಗಳು ಸಾಕಾರಗೊಳ್ಳುತ್ತಿವೆ. ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳಾಗುತ್ತಿವೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಶ್ಲಾಘಿಸಿದರು.ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಏರ್ಪಡಿಸಿದ್ದ ರೈಲು ಪ್ರಯಾಣಿಕರು ಮತ್ತು ಕುಟುಂಬದರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪ್ರಯಾಣಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದೆ ರೈಲ್ವೆ ನಿಲ್ದಾಣಗಳೆಂದರೆ ಪ್ರಯಾಣಿಕರು ಮೂಗುಮುರಿಯುವಷ್ಟು ಹೊಲಸು ಎಂಬ ಭಾವನೆ ಇತ್ತು. ಮೋದಿಯವರು ಪ್ರಧಾನಿಯಾದ ನಂತರ ರೈಲ್ವೆ ನಿಲ್ದಾಣಗಳು ಸ್ವಚ್ಛ, ಸುರಕ್ಷಿತ ಹಾಗೂ ಸೌಲಭ್ಯಪೂರಕವಾಗಿವೆ. ರೈಲ್ವೆ ಪ್ರಯಾಣಿಕರಿಗೂ ಹೆಚ್ಚಿನದಾಗಿ ಸುರಕ್ಷತೆ, ಸೌಕರ್ಯ ಒದಗಿಸಲಾಗಿದೆ. ಎಲ್ಲಾ ವರ್ಗದವರಿಗೂ ಕೈಗೆಟಕುವ ದರದಲ್ಲಿ ರೈಲ್ವೆ ಸೇವೆಗಳು ದೊರೆಯುತ್ತಿವೆ ಎಂದು ಹೇಳಿದರು.ದೇಶಪ್ರೇಮಿಯಾಗಿರುವ ಪ್ರಧಾನಿ ಮೋದಿಯವರು ಭಾರತದ ಅಭಿವೃದ್ಧಿಗೆ ದೂರದೃಷ್ಟಿ ಚಿಂತನೆ ಹೊಂದಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರ ಯಾವುದೇ ಅಗ್ಗದ ಯೋಜನೆಗಳಿಗೆ ಆದ್ಯತೆ ನೀಡದೆ, ದೇಶದ ಪ್ರಗತಿ ದೃಷ್ಟಿಯಿಂದ ಶಾಶ್ವತ, ಸಾರ್ಥಕ ಯೋಜನೆಗಳಿಗೆ ಒತ್ತು ನೀಡಿ ಕಾರ್ಯಗತಗೊಳಿಸುತ್ತಿದೆ. ತಮ್ಮ ಅಧಿಕಾರವಧಿಯ 12 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳು ವಿಕಿಸಿತ ಭಾರತ ಆಶಯಕ್ಕೆ ಪೂರಕವಾಗಿವೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.ವಿ. ಸೋಮಣ್ಣ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ತುಮಕೂರು ಜಿಲ್ಲೆಯಲ್ಲಿ ಹಿಂದೆಂದೂ ಆಗಿರದಂತಹ ರೈಲ್ವೆ ಇಲಾಖೆಯಿಂದ ಅಭಿವೃದ್ಧಿ ಕೆಲಸಗಳಾಗುತ್ತಿದೆ. ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ವೇಗ ನೀಡಿದ್ದಾರೆ. ಸುಮಾರು 80 ಕೋಟಿ ರು. ವೆಚ್ಚದಲ್ಲಿ ತುಮಕೂರು ರೈಲು ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ. 32ಕ್ಕೂ ಹೆಚ್ಚು ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕೆಳ ಹಾಗೂ ಮೇಲ್ಸೇತುವೆಗಳ ನಿರ್ಮಾಣಕ್ಕೆ ಸಚಿವ ವಿ. ಸೋಮಣ್ಣ ಕಾಳಜಿವಹಿಸಿ ಕಾರ್ಯಗತಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಕಳುಹಿಸಿದ್ದ ಸಂದೇಶವನ್ನು ವೇದಿಕೆಯ ಹಿರಿಯ ಉಪಾಧ್ಯಕ್ಷ ಮಾಧವಮೂರ್ತಿ ಓದಿದರು. ತುಮಕೂರು ನಗರ ಹಾಗೂ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದ್ದು ತಕ್ಕಂತೆ ರೈಲ್ವೆ ಇಲಾಖೆಯಿಂದ ಹೆಚ್ಚಿನ ಸೌಕರ್ಯ ಒದಗಿಸಲಾಗುತ್ತಿದೆ. ರೈತರ ಉತ್ಪನ್ನಗಳ ವಹಿವಾಟಿಗೆ ಅನುಕೂಲ ಮಾಡಿಕೊಡಲು ಶೀಘ್ರದಲ್ಲೇ ತುಮಕೂರು ಹಾಗೂ ಬೆಂಗಳೂರಿನ ವೈಟ್‌ಫೀಲ್ಡಿಂದ ಕಂಟೈನರ್ ಸೇವೆ ಒದಗಿಸಲಾಗುವುದು ಎಂದು ವಿ. ಸೋಮಣ್ಣ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.ಈ ವೇಳೆ ರೈಲ್ವೆ ಪ್ರಯಾಣಿಕರ ಕುಟುಂಬದ ಎಸ್‌ಎಸ್‌ಎಲ್‌ಸಿ ಮತ್ತು ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಜ್ಯೋತಿಗಣೇಶ್ ಪುರಸ್ಕಾರ ವಿತರಿಸಿ, ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ರೈಲ್ವೆ ಪ್ರಮಾಣಿಕರ ವೇದಿಕೆಯಿಂದ ಆರೋಗ್ಯ ತಪಾಸಣೆ, ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಿದ್ಧಗಂಗಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿ.ಎಸ್.ಎಸ್ ಐ ಅಂಡ್ ಇಎನ್‌ಟಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ರೈಲ್ವೆ ಪ್ರಯಾಣಿಕರ ಆರೋಗ್ಯ ತಪಾಸಣೆ ನೀಡಿ, ಅಗತ್ಯವಿರುವವರಿಗೆ ಉಚಿತ ಔಷಧಿ ವಿತರಿಸಿದರು. ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜು, ವೈದ್ಯರಾದ ಡಾ. ಹರ್ಷಿತಾ, ಡಾ. ಸುಷ್ಮಾ ಶೇಖರ್ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆ ಉಪಾಧ್ಯಕ್ಷ ಪರಮೇಶ್ ಸಿಂಧಗಿ, ಕಾರ್ಯದರ್ಶಿ ಸಿ. ನಾಗರಾಜ್, ಖಜಾಂಚಿ ಬಾಲಾಜಿ, ಜಂಟಿ ಕಾರ್ಯದರ್ಶಿಗಳಾದ ರಾಮಾಂಜನಯ್ಯ, ರವಿಶಂಕರ್, ನಿರ್ದೇಶಕರಾದ ಶಿವಕುಮಾರಸ್ವಾಮಿ, ಎಂ.ಆರ್. ರಘು, ಎಸ್. ರವಿಶಂಕರ್, ಉಮಾಶಂಕರ್, ಹುಸೇನ್, ನಾಗೇಂದ್ರ, ದೀಪಕ್, ಗುರುಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
