ಸಹನೆ ಕಟ್ಟೆ ಒಡೆದ ಹೇಮಾವತಿ ಕಿಚ್ಚು

KannadaprabhaNewsNetwork |  
Published : Jun 01, 2025, 01:54 AM ISTUpdated : Jun 01, 2025, 09:21 AM IST
Hemavathi Link Canal

ಸಾರಾಂಶ

ಕಳೆದ ಒಂದೂವರೆ ವರ್ಷದಿಂದ ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ನಡೆಯುತ್ತಿರುವ ಹೋರಾಟ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ನಿಷೇಧಾಜ್ಞೆ ನಡುವೆ ಹೆದ್ದಾರಿ ಬಂದ್, ಟೈರಿಗೆ ಬೆಂಕಿ ಹಾಗೂ ಕೆನಾಲ್ ಗೆ ಮಣ್ಣು ಹಾಕುವ ಮೂಲಕ ಅನ್ನದಾತರು ತಮ್ಮ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

  ಗುಬ್ಬಿ : ಕಳೆದ ಒಂದೂವರೆ ವರ್ಷದಿಂದ ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ನಡೆಯುತ್ತಿರುವ ಹೋರಾಟ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ನಿಷೇಧಾಜ್ಞೆ ನಡುವೆ ಹೆದ್ದಾರಿ ಬಂದ್, ಟೈರಿಗೆ ಬೆಂಕಿ ಹಾಗೂ ಕೆನಾಲ್ ಗೆ ಮಣ್ಣು ಹಾಕುವ ಮೂಲಕ ಅನ್ನದಾತರು ತಮ್ಮ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಅನ್ನದಾತರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಮಠಾಧೀಶರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಲು ಮುಂದಾದಾಗ, ಇದಕ್ಕೆ ಆಸ್ಪದ ನೀಡದೆ ಪೊಲೀಸರು ಹೋರಾಟ ಹತ್ತಿಕ್ಕಲು‌ ಹೋದಾಗ ಪ್ರತಿಭಟನಾಕಾರರ ಸಹನೆಯ ಕಟ್ಟೆ ಹೊಡೆದ ಪರಿಣಾಮ ಮೇಲಿನ ಘಟನೆಗೆ ಸಾಕ್ಷಿಯಾಯಿತು.

ಗುಬ್ಬಿ, ನಿಟ್ಟೂರು, ಕೆ.ಬಿ.ಕ್ರಾಸ್, ಚೇಳೂರು ಎಂ.ಎನ್.ಕೋಟೆ, ನಾಗೇನಹಳ್ಳಿ, ಮುದ್ದೆಹೊಸೂರು, ಮದನ್‌ ಘಟ್ಟ, ಮಲ್ಲಸಂದ್ರ, ದೊಡ್ಡಗುಣಿ ಸೇರಿದಂತೆ ವಿವಿಧ ಹೋಬಳಿ ಹಾಗೂ ತಾಲೂಕು ಮಟ್ಟದಿಂದ ಬಂದದ್ದ ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರು, ಮುಖಂಡರು, ರೈತರು, ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು, ಬಿಜೆಪಿ ಮುಖಂಡ ಎಸ್‍.ಡಿ ದಿಲೀಪ್ ಕುಮಾರ್, ಬಿಎಸ್ ನಾಗರಾಜು ಎಚ್ ಟಿ ಭೈರಪ್ಪ, ಹೊನ್ನಗಿರಿ ಗೌಡ, ಜಿ.ಎನ್ ಬೆಟ್ಟಸ್ವಾಮಿ, ರೈತ ಸಂಘದ ಸಿ.ಜಿ ಲೋಕೇಶ್, ಅಧ್ಯಕ್ಷ ವೆಂಕಟೇಗೌಡ, ಚಂದ್ರಶೇಖರ ಬಾಬು, ಪ್ರಕಾಶ್, ಹೆಬ್ಬಾಕ ರವಿ, ಗೊಲ್ಲಹಳ್ಳಿ ಮಠದ ವಿದ್ಯಾ ವಿಭವ ಶಂಕರ್ ಸ್ವಾಮೀಜಿ, ತ್ಯಾವಡೆಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಡೊದ್ದಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರದ ಮಠದ ಕಾರದ ವೀರಭದ್ರೇಶ್ವರ ಸ್ವಾಮೀಜಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

1 ಸಾವಿರ ಮಂದಿ ಪೊಲೀಸರು....

ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ 4 ಡಿವೈಎಸ್ಪಿ, 23 ಇನ್ಸ್‌ಪೆಕ್ಟರ್, 900 ಪೊಲೀಸರು ಸೇರಿದಂತೆ 1 ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ 3 ಕೆಎಸ್‌ಆರ್‌ಪಿ ತುಕಡಿಗಳನ್ನು ಕಾಮಗಾರಿ ಸ್ಥಳದ ಸುತ್ತಮುತ್ತ ಬಂದೋಬಸ್ತ್ ಕಾರ್ಯಕ್ಕೆ ಹಾಕಲಾಗಿತ್ತು.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿದೆ. ಶಾಂತಿ ರೀತಿಯಲ್ಲಿ ಹೋರಾಟ ಮಾಡಲು ನಾವೆಲ್ಲಾ ಬಂದಿದ್ದೇವೆ. ಆದರೆ ಪೊಲೀಸರು ಬ್ರಿಟಿಷರಂತೆ ವರ್ತಿಸುತ್ತಾ ಹೋರಾಟಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೆನಾಲ್‌ ಕೆಲಸ ನಿಲ್ಲಿಸಲಾಗದು: ಡಿಕೆಶಿ 

ಮಾಗಡಿ-ರಾಮನಗರಕ್ಕೆ ಕುಡಿಯುವ ನೀರು ಪೂರೈಸಲು ನಡೆಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹೀಗಿರುವಾಗ ಕಾಮಗಾರಿ ನಿಲ್ಲಿಸುವ ಪ್ರಮೇಯವೇ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.

ಹೇಮವಾತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ಕುರಿತು ಶಾಸಕರಾದ ಕೃಷ್ಣಪ್ಪ, ಸುರೇಶ್‌ ಗೌಡ ಅವರಿಗೆ ಅರಿವಿದೆ. ಆ ಬಗ್ಗೆ ನನ್ನ ಬಳಿಯೂ ಮಾತನಾಡಿದ್ದಾರೆ. ಆದರೂ, ಈಗ ಹೋರಾಟ ಮಾಡುತ್ತಿದ್ದಾರೆ. ಅದನ್ನು ನಾನು ತಪ್ಪು ಎಂದು ಹೇಳಲ್ಲ. ಶಾಸಕರಿಗೆ ಎಲ್ಲ ವಿಚಾರವೂ ತಿಳಿದಿದೆ ಎಂದು ಹೇಳಿದರು.

ನೀರಿನ ವಿಚಾರದಲ್ಲಿ ಯಾವುದೇ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಅಲ್ಲಿರುವವರು, ಇಲ್ಲಿರುವವರು ಎಲ್ಲರೂ ನಮ್ಮ ರೈತರೇ. ಎಲ್ಲರ ಹಿತವನ್ನೂ ನಾವು ಕಾಪಾಡುತ್ತೇವೆ. ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹೇಮವಾತಿ ಲಿಂಕ್‌ ಕೆನಾಲ್‌ಗೆ ವಿರೋಧಿಸಿ ವಿ.ಸೋಮಣ್ಣ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ವಿ.ಸೋಮಣ್ಣ ಕೇಂದ್ರ ಸಚಿವರು, ಹಿರಿಯರಿದ್ದಾರೆ. ಈ ವಿಚಾರವಾಗಿ ಅವರ ಬಳಿಯೂ ಮಾತನಾಡುತ್ತೇನೆ. ಅವರ ಮಾರ್ಗದರ್ಶನವನ್ನೂ ಕೇಳೋಣ ಎಂದರು.

ಹೇಮಾವತಿ ಲಿಂಕ್‌ ಕೆನಾಲ್‌ನಲ್ಲಿ ಯೋಜನೆಗೆ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಸೂಚಿಸಿದ್ದೇನೆ. ಕಾಮಗಾರಿ ಆರಂಭವಾದ ನಂತರ ಯೋಜನೆಗೆ ಅಡ್ಡಿಪಡಿಸುವ ಕೆಲಸವಾಗಬಾರದು.

ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ