ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕೋಮಹಳ್ಳಿ ಭಾಗದ ರೈತ ಮುಖಂಡ ಮಂಜು ನೇತೃತ್ವದಲ್ಲಿ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ರೈತರು ಸ್ಥಗಿತಗೊಂಡಿರುವ ಕಾಮಗಾರಿ ಪುನಾರಂಭಿಸುವಂತೆ ಆಗ್ರಹಿಸಿದರು.
ಹಲವು ದಶಕಗಳಿಂದ ನಾಲೆ ಅಧುನೀಕರಣಗೊಳ್ಳದೆ ವಿತರಣಾ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದರ ಪರಿಣಾಮ ನಾಲೆಯ ಅಚ್ಚುಕಟ್ಟು ಭಾಗದ ತೇಗನಹಳ್ಳಿ, ಅಣ್ಣೆಚಾಕನಹಳ್ಳಿ, ಕುಂದೂರು, ಕೋಮನಹಳ್ಳಿ, ಮಾಕವಳ್ಳಿ, ಹಿರಿಕಳಲೆ, ಲಿಂಗಾಪುರ, ಪುರ, ಗಾಂಧೀನಗರ, ಕಾಡುಮೆಣಸ, ಗಂಗನಹಳ್ಳಿ, ಹೆಗ್ಗಡಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ೫೧೭೫ ಎಕರೆ ಪ್ರದೇಶದ ಭೂಮಿಗೆ ನೀರು ಹರಿಯುತ್ತಿರಲಿಲ್ಲ ಎಂದಿದ್ದಾರೆ.ಮಾಕವಳ್ಳಿ ಗ್ರಾಮದ ರೈತ ಮುಖಂಡ ಕುಮಾರ್ ನೇತೃತ್ವದಲ್ಲಿ ದಶಕಗಳ ಕಾಲ ನಡೆದ ಹೋರಾಟದ ಫಲವಾಗಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ೫೫ ಕೋಟಿ ರು. ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಇದೀಗ ಕಾಮಗಾರಿ ಆರಂಭಿಸಿರುವ ಆರ್.ಕೆ.ಬಿ. ಕನ್‌ಸ್ಟ್ರಕ್ಷನ್ ಕಂಪನಿಯು ನೀರು ಹರಿಯದೆ ಹೂಳು ತುಂಬಿ, ಗಿಡಗೆಂಟೆಗಳು ಹಾಗೂ ಮುಳ್ಳಿನ ಪೊದೆಗಳಿಂದ ಮುಚ್ಚಿಕೊಂಡಿದ್ದ ನಾಲೆಗೆ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಮಾಡಿ ಕಾಲುವೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಿಸಿ ರೈತರ ದನಕರುಗಳು, ವಾಹನಗಳು ಹಾಗೂ ಎತ್ತಿನ ಗಾಡಿಗಳು ಸರಾಗವಾಗಿ ಓಡಾಡುವಂತೆ ಕಾಮಗಾರಿ ನಡೆಸುತ್ತಿದ್ದಾರೆ.
ಪ್ರಸ್ತುತ ಶೇ.೪೦ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು ಇನ್ನೂ ಶೇ.೬೦ರಷ್ಟು ಕಾಮಗಾರಿ ಮಾಡಬೇಕಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಈ ಭಾಗದ ರೈತರಾದ ನಾವು ಹಾಗೂ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಕಾಳಜಿಯಿಂದ ಎಚ್ಚರ ವಹಿಸುತ್ತೇವೆ. ೪೦ ವರ್ಷಗಳ ನಂತರ ನಡೆಯುತ್ತಿರುವ ನಾಲಾ ಆಧುನಿಕರಣ ಕೆಲಸಕ್ಕೆ ಯಾರೂ ತೊಂದರೆ ನೀಡಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಅಣ್ಣೆಚಾಕನಹಳ್ಳಿ ರಾಮಕೃಷ್ಣ, ಸತೀಶ್, ಮಂಜು, ಗಂಗನಹಳ್ಳಿ ರವಿಗೌಡ, ರಮೇಶ್, ಗವಿಗೌಡ, ಹಿರಿಕಳಲೆ ಸ್ವಾಮಿ, ಮಂಜುನಾಥ್, ರೋಷನ್, ತೇಗನಹಳ್ಳಿ ದಿನೇಶ್, ಕುಂದನಹಳ್ಳಿ ಸೋಮಶೇಖರ್, ರವಿ, ರಾಮಕೃಷ್ಣಅರಸ್, ಶಿವಕುಮಾರ್ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.