ಹೇಮಾವತಿ ನೀರು ಬೇರೆಡೆ ಬಿಡುವುದಿಲ್ಲ

KannadaprabhaNewsNetwork |  
Published : Nov 26, 2025, 01:15 AM IST
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ಮತ್ತು ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ನಡೆದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ. | Kannada Prabha

ಸಾರಾಂಶ

ಯಾರು ಬರಲಿ ಬಿಡಲಿ ನಾನು ಹೇಮಾವತಿ ನೀರು ಬೇರೆಡೆ ಹೋಗುವ ಕೆನಾಲ್ ಮಾಡಲು ಬಿಡುವುದಿಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಯಾರು ಬರಲಿ ಬಿಡಲಿ ನಾನು ಹೇಮಾವತಿ ನೀರು ಬೇರೆಡೆ ಹೋಗುವ ಕೆನಾಲ್ ಮಾಡಲು ಬಿಡುವುದಿಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ತಾಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ಮತ್ತು ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ನಡೆದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

ಎಲ್ಲಾ ರೈತರು ಯೋಚನೆ ಮಾಡಬೇಕಾದ ಸಮಯ. ಹೊಲಸು ರಾಜಕೀಯ ನೀರಿನ ವಿಚಾರದಲ್ಲಿ ಬೆರತರೆ ಮುಂದಿನ ಪೀಳಿಗೆಯ ಶಾಪ ನಮಗೆ ತಟ್ಟುತ್ತದೆ. ಹೇಮಾವತಿ ನೀರು ಜಿಲ್ಲೆಗೆ ತರಲು ನಡೆದ ದಶಕಗಳ ಹೋರಾಟಕ್ಕೆ ಹಲವು ಹೋರಾಟಗಾರರ ಶ್ರಮ ಇದೆ. ದೇವೇಗೌಡರು ಜಿಲ್ಲೆಗೆ ಹೇಮಾವತಿ ಹರಿಸಲು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡ, ಬೈರಪ್ಪಾಜಿ ಹೀಗೆ ಹಲವರ ಹೋರಾಟದ ಫಲ ನೀರು ಹರಿದುಬಂತು. ಆದರೆ ಈಗ ಹೇಮಾವತಿ ನೀರು ಯಾವ ಮಾನದಂಡ ಇಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಯಾವ ನಿಗಮದ ಅನುಮತಿ ಇಲ್ಲದೆ ಅವೈಜ್ಞಾನಿಕ ಲಿಂಕ್ ಕೆನಾಲ್ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ. ಡೈರಿ ಆರಂಭಿಸಲು ಸಲ್ಲದ ರಾಜಕೀಯ ಬೆರೆಸುವುದು ಸ್ಥಳೀಯ ಮುಖಂಡರು ಬಿಡಬೇಕು. ರೈತರ ಬದುಕು ಕಟ್ಟಿಕೊಡುವ ಡೈರಿ ಆರಂಭಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ನಾಟಿ ತಳಿಗಳು ಕಣ್ಮರೆಯಾಗಿವೆ. ಮಿಶ್ರ ತಳಿಗಳು ಸಹ ರೈತರಿಗೆ ಆಧಾರವಾಗಿದೆ. ಐದು ಹಸುಗಳು ಸಾಕಿದರೆ ರೈತನ ಕುಟುಂಬಕ್ಕೆ ಆಧಾರವಾಗಲಿದೆ ಎಂದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಖಾಸಗಿ ಡೈರಿಗಳನ್ನು ಬೆಳೆಸಲು ಹುನ್ನಾರ ನಡೆಸುವ ಕೆಲಸ ಕೆಲ ಗ್ರಾಮದಲ್ಲಿ ನಡೆದಿದೆ. ರಾಜಕೀಯವಾಗಿ ಜನ್ಮ ಕೊಟ್ಟ ಸಿ.ಎಸ್.ಪುರ ಹೋಬಳಿಯಲ್ಲಿ ಹೆಚ್ಚು ಡೈರಿ ತೆರೆಯುವ ಕೆಲಸ ಮಾಡುತ್ತಿದ್ದೇನೆ. ಇಲ್ಲೂ ಸಲ್ಲದ ರಾಜಕೀಯ ಬೆರೆಯುತ್ತಿದೆ. ವಾಸ್ತವ ಅರಿತು ರೈತರಿಗೆ ಸಹಕಾರಿಯಾಗುವ ಡೈರಿ ತೆರೆಯಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ಸಿ.ಎಸ್.ಪುರ ಹೋಬಳಿಯಲ್ಲಿ ಉತ್ಪಾದನೆಯಾಗುವ ಹಾಲು ಉಳಿದ 5 ಹೋಬಳಿಗೆ ಸಮ ಎನ್ನಬಹುದಾಗಿದೆ. ಸಾಕಷ್ಟು ಹಾಲು ಈ ಹೋಬಳಿ ನೀಡುತ್ತಿದೆ. ಈ ಹಿನ್ನಲೆ ಆಯಾ ಗ್ರಾಮದಲ್ಲೇ ಡೈರಿ ತೆರೆಯುವ ಕೆಲಸ ನಡೆದಿದೆ. ಮತ್ತೊಂದು ಗ್ರಾಮಕ್ಕೆ ತೆರಳುವ ಪ್ರಮೇಯ ತಪ್ಪಿಸುವ ನಿಟ್ಟಿನಲ್ಲಿ ಒಕ್ಕೂಟ ಸಾಗಿದೆ ಎಂದರು.ಇದೇ ಸಂದರ್ಭದಲ್ಲಿ 415 ಮಿಶ್ರ ತಳಿಗಳ ಕರುಗಳ ಪ್ರದರ್ಶನ ನಡೆಯಿತು. ಅವುಗಳ ವೀಕ್ಷಣೆಗೆ ಸಾವಿರಾರು ರೈತರು ಸಹ ಆಗಮಿಸಿದ್ದರು.ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ಕರುಗಳ ಆರೋಗ್ಯ ನಿರ್ವಹಣೆ ಕುರಿತಂತೆ ಹಲವು ಮಾರ್ಗಸೂಚಿಗಳನ್ನು ನೀಡಿ ಕರುಗಳಿಗೆ ದಿನಕ್ಕೆ ಅರ್ಧ ಕೆಜಿ ಪೌಷ್ಠಿಕ ಆಹಾರ ನೀಡುವುದು, ಜಂತುಹುಳ ನಿವಾರಣೆಗೆ ಸಮಯಕ್ಕೆ ಮಾತ್ರೆ ನೀಡುವುದು, ಗಿಣ್ಣು ಹಾಲು ನಿಯಮಿತವಾಗಿ ಕುಡಿಸುವುದು, ಬಾಯಿ–ಮೂಗಿನ ಲೋಳೆ ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ತಿಳಿಸಿದರು.ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ, ನಂಜೇಗೌಡ, ಉಪ ನಿರ್ದೇಶಕ ಶಿವಪ್ರಸಾದ್, ಪಶುಪಾಲನಾ ಅಧಿಕಾರಿಯಾದ ನಾಗರಾಜು, ರಂಗನಾಥ್, ಕುಮಾರಸ್ವಾಮಿ, ಲಲಿತಮ್ಮ, ಮಹಾಲಕ್ಷ್ಮಿ, ಎಂ.ಎಚ್.ಪಟ್ಟಣ ಗ್ರಾಪಂ ಅಧ್ಯಕ್ಷ ಯೋಗೀಶ್, ಮುಖಂಡರಾದ ಕೃಷ್ಣಮೂರ್ತಿ, ಕೆಂಪರಾಜು, ಚಿಕ್ಕಣ್ಣ, ದೇವರಾಜು, ಗಂಗಾಧರಯ್ಯ ಸೇರಿದಂತೆ ಹೈನುಗಾರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ