ಕನ್ನಡಪ್ರಭ ವಾರ್ತೆ ಕೋಲಾರವ್ಯಕ್ತಿ ತನ್ನ ಶಿಕ್ಷಣಕ್ಕಾಗಿ ಹಳ್ಳಿಯನ್ನ ತೊರೆಯುತ್ತಾನೆ, ತದನಂತರದಲ್ಲಿ ಉದ್ಯೋಗ ದೊರೆತ ನಂತರ ತನ್ನ ಹಳ್ಳಿಯನ್ನೇ ಮರೆಯುತ್ತಾನೆ. ಯಾರು ಹಳ್ಳಿಗಳ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೋ ಅಂತಹವರಲ್ಲಿ ಮಾತ್ರವೇ ಸಂಬಂಧ ಹಾಗೂ ಮನುಷ್ಯತ್ವ ಉಳಿದಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಯುವ ಸಾಹಿತಿ ಗೋಪಿನಾಥ್ ಕರವಿ ಕನಸು ಪುಸ್ತಕ ಜನಾರ್ಪಣೆ ಮಾಡಿ ಮಾತನಾಡಿದ ಅವರು, ಹಳ್ಳಿಯ ಸಂಪರ್ಕ ಕಳೆದುಕೊಂಡವರು ಬೇರಿನ ಜೊತೆ ಸಂಬಂಧ ಕಳೆದುಕೊಂಡಂತೆ. ಅಂತಹವರು ಕೊನೆಗೆ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾರೆ ಎಂದರು.ನಗರಗಳತ್ತ ಜನರ ವಲಸೆಜನರು ಪ್ರಗತಿ ಅಥವಾ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಗರಗಳ ಕಡೆ ವಾಲುತ್ತಿದ್ದು, ಹಳ್ಳಿಗಳಲ್ಲಿ ವಾಸ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಈ ಕಾರಣಗಳಿಗಾಗಿ ಹಳ್ಳಿಗಳು ಸಂಪೂರ್ಣ ಕಡೆಗಣಿಸಲ್ಪಡುತ್ತಿವೆ. ಮನುಷ್ಯ ವೈಭೋಗದ ಜೀವನಕ್ಕೆ ಜನ ಮಾರು ಹೋಗುತ್ತಿರುವುದರಿಂದ ಇಂದು ಗ್ರಾಮಗಳು ನಿರ್ಲಕ್ಷ್ಯಕ್ಕೀಡಾಗುತ್ತಿವೆ ಎಂದರು.
ಪುಸ್ತಕಗಳು ಓದುವ ಕಾಲ ದೂರವಾಗಿದ್ದು ಇಂತಹ ಸಂದರ್ಭದಲ್ಲಿ ಹಳ್ಳಿಯ ಸಮಗ್ರ ಅಭಿವೃದ್ಧಿ ಬಗ್ಗೆ ಕನಸು ಕಂಡು ಕೃತಿಯ ಹೊರತಂದಿರುವುದು ಈ ತಲೆಮಾರಿನ ಯುವಕರಿಗೆ ಮಾದರಿಯಾಗಬೇಕು ಎಂದರು.ಗ್ರಾಮೀಣ ಪರಿಸರ ಉಳಿಸಿ
ಆಧುನಿಕರಣ ಅಭಿವೃದ್ಧಿಯ ಪಥದಲ್ಲಿ ನಾವು ನಗರಗಳಲ್ಲಿ ಜೀವನ ಮಾಡಿ ಆ ನಗರಕ್ಕೆ ಹೊಂದಿಕೊಂಡು ಅನೇಕ ಗ್ರಾಮಗಳನ್ನ ನಗರಗಳು ನುಂಗಿ ಹಳ್ಳಿಗಳ ಅಸ್ತಿತ್ವ ಇಲ್ಲದಂತೆ ಮಾಡುತ್ತಿವೆ. ಹಳ್ಳಿಗಳಲ್ಲಿನ ಪರಿಸರ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ನಾವು ಒಂದು ಆದರ್ಶಮಯ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ, ಜನಪ್ರಕಾಶನದ ರಾಜಶೇಖರ್ ಮೂರ್ತಿ, ಡಾ.ಅರಿವು ಶಿವಪ್ಪ, ಹಿರಿಯ ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಎಚ್.ಎ.ಪುರುಷೋತ್ತಮರಾವ್, ಮಂಜು ಕನ್ನಿಕ, ಶಾಂತಮ್ಮ ಗಮನ, ವಾರಿಧಿ ಮಂಜುನಾಥ ರೆಡ್ಡಿ, ವಾಸುದೇವರೆಡ್ಡಿ, ಕವಿ ಡಾ.ಸತ್ಯಮೂರ್ತಿ ಗೂಗಿ ಇದ್ದರು.