ಬೆಳೆಗಳಿಗೆ ಹರಿಯಬೇಕಿದ್ದ ಹೇಮೆ ನೀರು ಖಾಸಗಿ ಕಿರು ವಿದ್ಯುತ್ ಉತ್ಪಾದನಾ ಘಟಕಕ್ಕೆ..!

KannadaprabhaNewsNetwork |  
Published : Apr 26, 2026, 03:00 AM IST
23ಕೆಎಂಎನ್ ಡಿ12,13 | Kannada Prabha

ಸಾರಾಂಶ

ರೈತರ ಹೊಲ ಗದ್ದೆಗಳಿಗೆ ಹರಿಯಬೇಕಾದ ಹೇಮಾವತಿ ನೀರು ಎಂಜಿನಿಯರ್‌ಗಳ ಕೈಚಳಕದಿಂದ ಖಾಸಗಿ ಕಿರು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಹರಿಯುತ್ತಿದೆ. ಇತ್ತ ಭತ್ತ ಸೇರಿದಂತೆ ಇತರೆ ಬೆಳೆಗಳು ಬಿರು ಬೇಸಿಗೆ ಸಿಲುಕಿ ಒಣಗಲಾರಂಭಿಸಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರೈತರ ಹೊಲ ಗದ್ದೆಗಳಿಗೆ ಹರಿಯಬೇಕಾದ ಹೇಮಾವತಿ ನೀರು ಎಂಜಿನಿಯರ್‌ಗಳ ಕೈಚಳಕದಿಂದ ಖಾಸಗಿ ಕಿರು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಹರಿಯುತ್ತಿದೆ. ಇತ್ತ ಭತ್ತ ಸೇರಿದಂತೆ ಇತರೆ ಬೆಳೆಗಳು ಬಿರು ಬೇಸಿಗೆ ಸಿಲುಕಿ ಒಣಗಲಾರಂಭಿಸಿವೆ.

ಕಳೆದ ಒಂದು ಶತಮಾನಗಳ ಹಿಂದೆಯೇ ಹೇಮಾವತಿ ನೀರನ್ನು ರೈತರ ಕೃಷಿ ಭೂಮಿಗೆ ಹರಿಸಲು ಅಂದಿನ ಮೈಸೂರು ಅರಸರು ತಾಲೂಕಿನ ಮಂದಗೆರೆ ಮತ್ತು ಹೇಮಗಿರಿಯ ಬಳಿ ತಲಾ ಒಂದೊಂದು ನದಿ ಒಡ್ಡು ಅಣೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ನಾಲಾ ಬಯಲಿನ ವ್ಯಾಪ್ತಿಯಲ್ಲಿ ಶೇ.80 ರಷ್ಟು ರೈತರು ಭತ್ತ ಮತ್ತು ಕಬ್ಬು ಬೆಳೆದರೆ ಉಳಿದಂತೆ ತೆಂಗು, ಅಡಿಕೆ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳಿವೆ.

ಮಂದಗೆರೆ ಮತ್ತು ಹೇಮಗಿರಿ ನದಿ ಅಣೆಕಟ್ಟೆ ನಾಲೆಗಳು ಹೇಮಾವತಿ ನದಿ ನೀರಿನ ಒಳ ಹರಿವನ್ನು ಅಧರಿಸಿ ರೈತರಿಗೆ ನಿರೊದಗಿಸುತ್ತವೆ. ಬೇಸಿಗೆ ಬೆಳೆ ಬಗ್ಗೆ ನೀರಾವರಿ ಇಲಾಖೆ ಪ್ರಸಕ್ತ ಸಾಲಿನಲ್ಲಿ ಯಾವುದೇ ಮಾಹಿತಿ ನೀಡದ ಪರಿಣಾಮ ಈ ನಾಲೆಗಳ ವ್ಯಾಪ್ತಿಯಲ್ಲಿ ರೈತರು ಭತ್ತದ ನಾಟಿ ಮಾಡಿದ್ದಾರೆ. ಸಂಮೃದ್ದ ಫಸಲಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕೆ.ಆರ್.ಎಸ್ ಅಣೆಕಟ್ಟೆಗೆ ಪೂರ್ವದ ನಾಲೆಗಳಾಗಿರುವುದರಿಂದ ಸದರಿ ನಾಲೆಗಳು ಕಾವೇರಿ ಜಲ ವಿವಾದದ ವ್ಯಾಪ್ತಿಗೆ ಬರುವುದಿಲ್ಲ. ಈ ನಾಲೆಗಳ ಮುಖಾಂತರ ರೈತರ ಹೊಲಗದ್ದೆಗಳಿಗೆ ನೀರು ಹರಿಸಲು ನೀರಾವರಿ ಇಲಾಖೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಆದರೆ, ಭತ್ತದ ನಾಟಿಗೂ ಮುನ್ನ ಸದರಿ ನಾಲೆಗಳ ಮುಖಾಂತರ ನೀರು ಹರಿಸಿದ ನೀರಾವರಿ ಇಲಾಖೆ ಈಗ ದಿಢೀರನೇ ನಾಲೆಗಳ ನೀರು ಬಂದ್ ಮಾಡಿದೆ. ಇದರಿಂದ ಈ ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳು ಸಕಾಲದಲ್ಲಿ ನೀರು ಹರಿಯದಿದ್ದರೆ ಒಣಗುವ ಭೀತಿಗೆ ಸಿಲುಕಿವೆ.

ಮಳೆ ಅಭಾವದ ಕಾಲಘಟ್ಟದಲ್ಲಿ ನೀರಾವರಿ ಇಲಾಖೆ ಕಟ್ಟು ನೀರು ಪದ್ಧತಿಯಲ್ಲಿ ಈ ನಾಲೆಗಳ ಮುಖಾಂತರ ನೀರು ಹರಿಸುತ್ತಿತ್ತು. ನದಿಯಲ್ಲಿ ನೀರಿನ ಹರಿಯುವಿಕೆ, ಪ್ರಮಾಣ ಕಡಿಮೆಯಾದರೆ ಗೊರೂರಿನ ಹೇಮಾವತಿ ಜಲಾಶಯದಿಂದ ಒಂದಷ್ಟು ಒಳಹರಿವಿನ ಪ್ರಮಾಣ ಹೆಚ್ಚಿಸಿ ರೈತರ ಬೆಳೆ ಸಂರಕ್ಷಣೆ ಮಾಡಲಾಗುತ್ತಿತ್ತು.

ರೈತರ ಹಿತಾಸಕ್ತಿ ಮರೆತಿರುವ ನೀರಾವರಿ ಇಲಾಖೆ ಎಂಜಿನಿಯರ್‌ಗಳು ನದಿ ಕಾಲುವೆಯ ಮುಖಾಂತರ ರೈತರ ಜಮೀನುಗಳಿಗೆ ಹರಿಯಬೇಕಾಗಿದ್ದ ಹೇಮೆ ನೀರನ್ನು ಅಣೆಕಟ್ಟೆಗಳ ಕೆಳಭಾಗದಲ್ಲಿರುವ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಹರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ.ಬೆಳೆದು ನಿಂತಿರುವ ಬೆಳೆ ಸಂರಕ್ಷಣೆಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಬರುವ ಹೆಚ್ಚುವರಿ ನೀರನ್ನು ಬಳಕೆ ಮಾಡಿ ವಿದ್ಯುತ್ ಕಂಪನಿಗಳು ವಿದ್ಯುತ್ ಉತ್ಪಾದನೆ ಮಾಡಬೇಕೆ ಹೊರತು ರೈತರ ನೀರನ್ನು ಕಸಿಯುವ ಹಕ್ಕು ಕಂಪನಿಗಳಿಗಿಲ್ಲ. ಬೆಳೆಗಳಿಗೆ ನೀರು ಬಿಡದಿರುವ ಎಂಜಿನಿಯರ್‌ಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು. ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಮುಂದಾಗದಿದ್ದರೆ ರೈತ ಸಂಘದಿಂದ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಲಾಗುವುದು

- ಕಾರಿನಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ