ಬೆಳ್ತಂಗಂಡಿಯ ಲಿಲ್ಲಿ ಲೀಲಾವತಿಯಾಗಿ ಮೆರೆದಳು!

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ಬೆಳ್ತಂಗಡಿಯ ಲಿಲ್ಲಿ ಕನ್ನಡ ಚಿತ್ರರಂಗದಲ್ಲಿ ಲೀಲಾವತಿಯಾಗಿ ಮೆರೆದಳು, ನಟಿಯ ನಿಕಟವರ್ತಿ ತಮ್ಮ ಲಕ್ಷ್ಮಣ ಮೆಲುಕು

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುಭಾಷಾ ನಟಿಯಾಗಿ ಕನ್ನಡ ಚಿತರಂಗದಲ್ಲಿ ಮೆರೆದ ನಟಿ ಲೀಲಾವತಿ ದಕ್ಷಿಣ ಕನ್ನಡದವರು ಎಂಬುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಅವರು ಜಿಲ್ಲೆಯ ಬೆಳ್ತಂಗಡಿ ಮೂಲದವರಾಗಿದ್ದು, ಹಲವು ತುಳು ಚಿತ್ರಗಳಲ್ಲೂ ನಟಿಸಿ ತಮ್ಮ ಛಾಪು ಮೂಡಿಸಿದ್ದಾರೆ.

ಹಿರಿಯ ಬಹುಭಾಷಾ ನಟಿ ಲೀಲಾವತಿ ಅವರ ಎರಡು ದಶಕಗಳ ಹತ್ತಿರದ ಒಡನಾಡಿ ಮಂಗಳೂರಿನ ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಲೀಲಾವತಿ ಅವರ ಬಾಲ್ಯ ದಿನಗಳೂ ಸೇರಿದಂತೆ ಹಲವು ನೆನಪಿನ ಸುರುಳಿಯನ್ನು ಕನ್ನಡಪ್ರಭದೊಂದಿಗೆ ವಿವರಿಸಿದ್ದು ಹೀಗೆ:

ಲಿಲ್ಲಿ ಲೀಲಾವತಿಯಾದಳು:

ಲೀಲಾವತಿ ಅವರ ಮೂಲ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕು. ಅನಾಥ ಶಿಶುವಾಗಿ ಆಸ್ಪತ್ರೆಯಲ್ಲಿದ್ದ ಲೀಲಾವತಿ ಅವರನ್ನು ಮಂಗಳೂರಿನ ಕ್ರೈಸ್ತ ಕುಟುಂಬವೊಂದು ಸಾಕಿ ಸಲಹಿತ್ತು. ಬಾಲ್ಯದಲ್ಲಿ ಲೀಲಾವತಿ ಅವರ ಹೆಸರು ಲಿಲ್ಲಿ ಎಂಬುದಾಗಿತ್ತು. ಕಂಕನಾಡಿ ಶಾಲೆಯಲ್ಲಿ ಎರಡನೇ ತರಗತಿವರೆಗೆ ಓದಿದ ಲಿಲ್ಲಿ ಬಳಿಕ ಅವರಿವರ ಮನೆಗೆಲಸ ಮಾಡುತ್ತಿದ್ದರು. ಅದರಿಂದಲೇ ಜೀವನ ಸಾಗಿಸುತ್ತಿದ್ದರು. ಬಾಲ್ಯದಲ್ಲೇ ಸಿನಿಮಾ ಆಕರ್ಷಣೆಯಿಂದ ಸಿನಿಮಾದಲ್ಲಿ ಅಭಿನಯಿಸುವ ಚಪಲ ಉಂಟಾಗಿತ್ತು. ಅದಕ್ಕಾಗಿ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿ ಸೇರಿದ್ದರು. ಆಗಿನ ಕಾಲದಲ್ಲಿ ಸಿನಿಮಾದಲ್ಲಿ ಅಭಿನಯಿಸಬೇಕಾದರೆ ನಾಟಕದಲ್ಲಿ ಅಭಿನಯ ಕಡ್ಡಾಯ ಎಂಬುದಿತ್ತು. ಮೈಸೂರಿಗೆ ತೆರಳಿದ ಲಿಲ್ಲಿ ನಾಟಕ ಕಂಪನಿಯಲ್ಲಿ ಲೀಲಾಕಿರಣ್‌ ಆದರು. ಮುಂದೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಕರಾವಳಿಯ ತುಳು ರಂಗಭೂಮಿ, ಸಿನಿಮಾಗೆ ಲೀಲಾವತಿಯನ್ನು ಮರಳಿ ಕರೆತಂದವರು ಕೆ.ಎನ್‌.ಟೇಲರ್‌, ಸುಂದರ ಕರ್ಕೇರ ಹಾಗೂ ಆರೂರು ಪಟ್ಟಾಭಿ.

ಚಿತ್ರರಂಗದಲ್ಲಿ ಉತ್ತಂಗಕ್ಕೆ ಏರಿದ ಲೀಲಾವತಿ ಅವರು ಮತ್ತೆ ಹಿಂತಿರುಗಿ ನೋಡಿಲ್ಲ. ತವರು ಮಂಗಳೂರಿಗೆ ಪ್ರತಿ ವರ್ಷ ಬಂದುಹೋಗುತ್ತಿದ್ದರು. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಅನಾರೋಗ್ಯಪೀಡಿತರಾದ ಮೇಲೆ ಮಂಗಳೂರಿಗೆ ಬರಲು ಸಾಧ್ಯವಾಗಿಲ್ಲ.

ವಿನೋದ್‌ರಾಜ್‌ ಜೊತೆ ತುಳು ಸಿನಿಮಾ ಮಾಡುವ ಆಸೆಯಿತ್ತು:

‘ಪುತ್ರ ವಿನೋದ್‌ರಾಜ್‌ ಜೊತೆ ಹೊಸದೊಂದು ತುಳು ಸಿನಿಮಾ ಮಾಡುವ ಬಗ್ಗೆ ಹಿರಿಯ ನಟಿ ಲೀಲಾವತಿ ಬಹಳ ತುಡಿತದಲ್ಲಿದ್ದರು. ಆದರೆ ಅದು ಕೊನೆಗೂ ಈಡೇರಲೇ ಇಲ್ಲ ಎಂದು ತಮ್ಮ ಲಕ್ಷ್ಮಣ ಅವರು ವಿಷಾದದಿಂದ ನುಡಿದರು.

2009ರಲ್ಲಿ ನಾನು ನಿರ್ದೇಶಿಸಿ ಅಭಿನಯಿಸಿದ ‘ಯಾರದು’ ಕನ್ನಡ ಸಿನಿಮಾದಲ್ಲಿ ಲೀಲಾವತಿ ಅಭಿನಯಿಸಿದ್ದರು. ಅದುವೇ ಅವರ ಅಭಿನಯದ ಕೊನೆ ಕನ್ನಡ ಸಿನಿಮಾ. ಆ ವೇಳೆ ಬೆಂಗಳೂರಿನಲ್ಲಿ ವರ್ಷ ಕಾಲ ನಾನು ಅವರ ಒಡನಾಡಿಯಾಗಿದ್ದೆ. ನಾವು ಇಬ್ಬರೂ ಕರಾವಳಿಯ ತುಳುನಾಡಿನವರಾದ ಕಾರಣ ಸಲುಗೆ, ವಿಶ್ವಾಸ ಇತ್ತು. ತುಳು ಸಿನಿಮಾಗಳ ಬಗ್ಗೆ ನಾವು ಮಾತನಾಡುತ್ತಿದ್ದಾಗ ಲೀಲಾವತಿಯವರು ಹೊಸ ಸಿನಿಮಾ ಮಾಡುವ ಬಯಕೆ ಮುಂದಿಟ್ಟರು. ನಾನು, ವಿನೋದ್‌ರಾಜ್‌ ಹಾಗೂ ಲೀಲಾವತಿ ಸೇರಿ ಸಿನಿಮಾ ಮಾಡುವ ಇರಾದೆಯನ್ನು ಹೇಳಿದ್ದರು. ಆಗ ಅವರಲ್ಲಿ ಆರ್ಥಿಕ ಶಕ್ತಿಯೂ ಇತ್ತು. ನಂತರದ ದಿನಗಳಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾಗಿ ಹೊಸ ಸಿನಿಮಾ ಆಸೆ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ತಮ್ಮ ಲಕ್ಷ್ಮಣ ನೆನಪಿನ ಸುರುಳಿ ಬಿಚ್ಚಿದರು.

ಸಿನಿಮಾ ಶೂಟಿಂಗ್‌ ದಿನಗಳಲ್ಲಿ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಅವರೇ ಬುತ್ತಿಯನ್ನು ತಂದು ನನಗೆ ಕೊಡುತ್ತಿದ್ದರು. ಮಾತ್ರವಲ್ಲ ಹಂಚಿಕೊಂಡು ತಿನ್ನುತ್ತಿದ್ದರು. ಅವರೇ ಕೈಯಾರೆ ತಿನಿಸಿದ್ದೂ ಇದೆ ಎನ್ನುತ್ತಾರೆ ಅವರು.

ರಾಜ್ಯ ಪ್ರಶಸ್ತಿ ತಂದ ಸಿನಿಮಾ:

ಮೂಲತಃ ತುಳುನಾಡಿನವರೇ ಆದ ಲೀಲಾವತಿ ಅ‍ವರು ತುಳು ಸಿನಿಮಾದಲ್ಲೂ ತನ್ನದೇ ಛಾಪು ಬೀರಿದ್ದಾರೆ. ಲೀಲಾವತಿ ಅಭಿನಯಿಸಿದ ‘ಬಿಸತ್ತಿ ಬಾಬು’ ಸಿನಿಮಾಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು. 1973ರ ದಶಕದಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗೆ ಪ್ರಶಸ್ತಿ ಬಂದಿರುವುದು ಬಹಳ ಹೆಮ್ಮೆಯ ಸಂಗತಿ. ಆ ಸಿನಿಮಾದಲ್ಲಿ ಲೀಲಾವತಿ ಅವರ ಅಭಿನಯ ಮನೋಜ್ಞವಾಗಿತ್ತು ಎನ್ನುತ್ತಾರೆ ತಮ್ಮ ಲಕ್ಷ್ಮಣ.

ಲೀಲಾವತಿಯವರು 1971ರಿಂದ ದಾರೆದ ಸೀರೆ, ಪಗೆತ ಪುಗೆ, ಬಿಸತ್ತಿ ಬಾಬು, ಯಾನ್‌ ಸನ್ಯಾಸಿ ಆಪೆ, ಸಾವಿರಡೊರ್ತಿ ಸಾವಿತ್ರಿ, ಭಾಗ್ಯವಂತೆದಿ, ಬದ್ಕೆರೆಬುಡ್ಲೆ, ದಾರೆದ ಸೀರೆ ಮುಂತಾದ ಸಿನಿಮಾಗಳಲ್ಲಿ ಲೀಲಾವತಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಆತ್ಮೀಯನದ್ದೇ ಕೊನೆ ಸನ್ಮಾನ:

ತುಳು ಸಿನಿಮಾಗೆ 50 ವರ್ಷ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ.3ರಂದು ಅದ್ದೂರಿ ಸಮಾರಂಭ ಏರ್ಪಾಟಾಗಿತ್ತು. ಅದರಲ್ಲಿ ಲೀಲಾವತಿಗೂ ಸನ್ಮಾನ ನಿಗದಿಯಾಗಿತ್ತು. ಆದರೆ ಅನಾರೋಗ್ಯ ಕಾರಣ ಅವರು ಸಮಾರಂಭಕ್ಕೆ ಬಂದಿರಲಿಲ್ಲ. ಹೀಗಾಗಿ ಅಕ್ಟೋಬರ್‌ 31ರಂದು ನಿರ್ದೇಶಕ ಶ್ರೀನಿವಾಸ್‌ ಹಾಗೂ ನಾನು ಬೆಂಗಳೂರಿನ ನೆಲಮಂಗಲ ಬಳಿಯ ಸೋಲದೇವನ ಹಳ್ಳಿಯ ಮನೆಗೆ ತೆರಳಿ ಲೀಲಾವತಿ ಅವರನ್ನು ಸನ್ಮಾನಿಸಿದ್ದೆವು. ಆಗ ಗಂಟೆಗಳ ಕಾಲ ನಾವು ಮಾತನಾಡಿದ್ದೆವು. ಚಿತ್ರರಂಗದ ಈಗಿನ ಸ್ಥಿತಿಗತಿಯ ಬಗ್ಗೆ ಮನಬಿಚ್ಚಿ ಹೇಳಿದ್ದರು. ಬಳಿಕ ಅವರ ಪುತ್ರ ವಿನೋದ್‌ರಾಜ್‌ ಜತೆ ಮಾತನಾಡಿದ್ದೆ. ಅವರ ಆರೋಗ್ಯ ವಿಚಾರಿಸುತ್ತಾ ಇರುತ್ತಿದೆ. ನಾವು ಒಂದೇ ಊರಿನವರಾದ ಕಾರಣ ನನ್ನ ಬಗ್ಗೆ ಲೀಲಾವತಿಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿಮಾನ. ಇದನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ತಮ್ಮ ಲಕ್ಷ್ಮಣ.

Share this article