ಕನ್ನಡಪ್ರಭ ವಾರ್ತೆ ಕುಂದಗೋಳ
ರಾಜ್ಯದಲ್ಲಿ ಈ ವರ್ಷ ಬರದ ಛಾಯೆ ಆವರಿಸಿದ ಹಿನ್ನೆಲೆ ರೈತರು ಸಂಕಷ್ಟದಲ್ಲಿದ್ದು, ಉದ್ಯೋಗ ಅರಿಸಿ ಬೇರೆ ಕಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಸರ್ಕಾರದ ಗ್ರಾಮೀಣ ಯೋಜನೆಗಳಲ್ಲಿ ಅನುದಾನ ಬಿಡುಗಡೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎಂ.ಆರ್. ಪಾಟೀಲ್ ಹೇಳಿದರು.ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಬರದ ಕುರಿತು ನಡೆದ ಚರ್ಚೆ ವೇಳೆ ಆಗ್ರಹಿಸಿದರು.
ಹೊಲಗಳಿಗೆ ಪ್ರತಿ ಎಕರೆಗೆ ₹25ರಿಂದ ₹30ಸಾವಿರ ಖರ್ಚು ಮಾಡಿದರೂ ಕನಿಷ್ಠ ₹2000 ಸಹ ಬರದಂತಹ ಪರಿಸ್ಥಿತಿ ರೈತನದ್ದಾಗಿದೆ. ಕಳೆದ ವರ್ಷದವರೆಗೂ ಕಿಸಾನ್ ಸಮ್ಮಾನದಲ್ಲಿ ರಾಜ್ಯದ ರೈತರಿಗೆ ಪ್ರತಿವರ್ಷ ₹4 ಸಾವಿರ ಕೊಡಲಾಗುತ್ತಿತ್ತು. ಅದು ಸಹ ಈಗ ನಿಲ್ಲಿಸಲಾಗಿದೆ. ಇದು ಸಹ ರಾಜ್ಯದ ರೈತರು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದೆ.ಕಳೆದ ವರ್ಷದಲ್ಲಿ ನೀಡಿದ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್ ಅನುದಾನದಲ್ಲಿ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಕುಂದಗೋಳ ತಾಲೂಕಿನ ಚಿತ್ರಣ ಬೇರೆ ತೆರನಾಗಿದ್ದು, ಯಾವುದೇ ನೀರಾವರಿ ಯೋಜನೆಗಳಿಲ್ಲ. ಮಳೆ ಆಶ್ರಿತ ಭೂಮಿ ಇಲ್ಲಿದೆ. ಯರಿಭೂಮಿ ಇಲ್ಲಿದೆ. ಕೆಲ ಹಳ್ಳಿಗಳಿಗೆ ಮಾತ್ರ ಬೋರಿನ ವ್ಯವಸ್ಥೆ ಇದೆ. ಆದರೆ ವಿದ್ಯುತ್ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಆದಕಾರಣ ತ್ರಿಫೇಸ್ ವಿದ್ಯುತ್ ನೀಡುವ ಸಮಯವನ್ನು ಬದಲಿಸಬೇಕು ಎಂದು ಆಗ್ರಹಿಸಿದರು.ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಿ ರೈತರಿಗೆ ಉಚಿತವಾಗಿ ಒದಗಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರತಿ ತಾಲೂಕಿಗೂ ಒಂದು ಕೋಟಿ ಮೀಸಲಿಡಬೇಕು. ಕುಂದಗೋಳ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.