ಸ್ಮಶಾನ ಭೂಮಿಗಾಗಿ ಹೇರೂರ್(ಬಿ) ಗ್ರಾಮಸ್ಥರ ಹೋರಾಟ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಕಲಬುರಗಿ ತಾಲೂಕಿನ ಹೇರೂರ್‌ (ಬಿ) ಗ್ರಾಮಸ್ಥರು ಮೃತದ ಶವ ಸಂಸ್ಕಾರಕ್ಕೆ ಭೂಮಿ ಒದಗಿಸಬೇಕೆಂದು ಕಲಬುರಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ತಾಲೂಕಿನ ಹೇರೂರ್ (ಬಿ) ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಜನ ಪರದಾಡುವಂತಾಗಿದೆ. ಸರ್ವೆ ನಂಬರ್ 238/1ರಲ್ಲಿರುವ ಒಂದು ಎಕರೆ 30 ಗುಂಟೆ ಸರ್ಕಾರಿ ಸ್ಮಶಾನಭೂಮಿ ಕಬಳಿಕೆಯಾಗಿದೆ, ಅಕ್ರಮಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಅನಧಿಕೃತ ದಾಖಲಾತಿಗಳನ್ನು ತಯಾರಿಸಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಒತ್ತಾಯಿಸಿ ನಗರದಲ್ಲಿ ಹೆರೂರ್‌ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಭೂಮಾಪನಾ ಇಲಾಖೆ ಹಾಗೂ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳಿಗೆ ಲಂಚ ಕೊಟ್ಟು ಅನಧಿಕೃತ ಹಿಸ್ಸಾ ಬದಲಾವಣೆಯ ದಾಖಲಾತಿಗಳನ್ನು ಸೃಷ್ಟಿಸಿ ಸುಮಾರು 9000ಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಹೇರೂರ್(ಬಿ) ಗ್ರಾಮಸ್ಥರಿಗೆ ಶವ ಸಂಸ್ಕಾರ ಮಾಡಲು ಜಾಗ ಇಲ್ಲದಂತೆ ಮಾಡಿರುವ ರಾಜಶೇಖರ್ ತಂದೆ ಮಲ್ಲಿಕಾರ್ಜುನ್, ಪ್ರಕಾಶ್ ತಂದೆ ಮಲ್ಲಿಕಾರ್ಜುನ್, ಸತೀಶ್ ತಂದೆ ಮಲ್ಲಿಕಾರ್ಜುನ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪುರಾತನ ಕಾಲದಿಂದಲೂ ಗ್ರಾಮಸ್ಥರು ಶವ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಆದಾಗ್ಯೂ, ಅದೇ ಗ್ರಾಮದ ರಾಜಶೇಖರ್ ತಂದೆ ಮಲ್ಲಿಕಾರ್ಜುನ್, ಪ್ರಕಾಶ್ ತಂದೆ ಮಲ್ಲಿಕಾರ್ಜುನ್, ಸತೀಶ್ ತಂದೆ ಮಲ್ಲಿಕಾರ್ಜುನ್ ಅವರ ತಂದೆಯ ಹೆಸರಿನಲ್ಲಿ ಜಮೀನು ಇದೆ. ತಮ್ಮ ಐದು ಎಕರೆ 32 ಗುಂಟೆ ಜಮೀನಿನಲ್ಲಿ ಕೆಲವರಿಗೆ ನಿವೇಶನ ರೂಪದಲ್ಲಿ ಮಾರಾಟ ಮಾಡಿದ್ದಾರೆ. ಅದೇ ಜಮೀನಿನಲ್ಲಿ ಬೆಳಗುಂಪಾ ಗ್ರಾಮಕ್ಕೆ ಹೋಗುವ ರಸ್ತೆ ಇದೆ. ಸಾರ್ವಜನಿಕರಿಗೆ ಸರ್ಕಾರಿ ಕುಡಿಯುವ ನೀರಿನ ಎರಡು ಟ್ಯಾಂಕ್‍ಗಳು ಇವೆ. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯೂ ಸಹ ಇದೆ. ಉಳಿದ ಜಮೀನು ಅನಧಿಕೃತವಾಗಿ ಕೆಲವರಿಗೆ ನಿವೇಶನಗಳಂತೆ ಮಾರಾಟ ಮಾಡಿದ್ದಾರೆ.

ಅವರಿಗೆ ತಮ್ಮ ಬಳಕೆಗಾಗಿ ಖುಲ್ಲಾ ಜಮೀನು ಇಲ್ಲದಂತಾಗಿ ಪಕ್ಕದಲ್ಲಿಯೇ ಇರುವ ಒಂದು ಎಕರೆ 30 ಗುಂಟೆ ಜಮೀನು ಕಬಳಿಸುವ ಹುನ್ನಾರದಿಂದ ಸ್ಮಶಾನಭೂಮಿ ನಕಾಶೆಯನ್ನು ಬದಲಾಯಿಸಿ, ರಸ್ತೆ ಹಾಗೂ ನೀರಿನ ಟ್ಯಾಂಕ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಇರುವ ಸ್ಥಳದಲ್ಲಿ ತೋರಿಸಿ ಹಿಸ್ಸಾ ಬದಲಾವಣೆ ಮಾಡಿ 238/2 ಎಂದು ನಕಾಶೆ ತಯಾರಿಸಿ ತಮ್ಮ ಹೆಸರಿಗೆ ನಕಾಶೆ ಸ್ಮಶಾನಭೂಮಿ ಬರುವಂತೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಕಳೆದ ಜುಲೈ 8ರಂದು ಸ್ಮಶಾನಭೂಮಿಯಲ್ಲಿ ಇರುವ ಸಮಾಧಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವಾಗ ಅದನ್ನು ಗ್ರಾಮಸ್ಥರು ಪ್ರಶ್ನಿಸಿದರು. ಆಗ ಆ ಜಮೀನು ತಮ್ಮದು ಎಂದು, ಇಲ್ಲಿ ಶವ ಸಂಸ್ಕಾರ ಮಾಡುವಂತಿಲ್ಲ ಎಂದು ಕಬಳಿಕೆದಾರರು ಹೆದರಿಸಿದರು. ಸ್ಥಳಕ್ಕೆ ತಹಸಿಲ್ದಾರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಫರತಾಬಾದ್ ಠಾಣೆಯ ಸಿಪಿಐ ಮುಂತಾದವರು ಆಗಮಿಸಿ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ನೀಡಿದ್ದರೂ ಇನ್ನೂ ಈಡೇರಿಲ್ಲವೆಂದರು.

ತಹಸಿಲ್ದಾರರು ನಂತರ ಭೂಮಾಪನಾ ಇಲಾಖೆಯಿಂದ ಸರ್ವೆ ಮಾಡಿಸಿ ವರದಿ ಪಡೆದಿದ್ದಾರೆ. ಸದರಿ ವರದಿಯಲ್ಲಿ 238/1ರಲ್ಲಿ ಸ್ಮಶಾನಭೂಮಿ ಇದೆ ಎಂದು ತಾಲೂಕು ಭೂಮಾಪಕರು ನಕಾಶೆಯೊಂದಿಗೆ ವರದಿ ಕೊಟ್ಟಿದ್ದರೂ ಭೂಕಬಳಕೆದಾರರು ಶವ ಸಂಸಕಾರಕ್ಕೆ ಅವಕಾಶ ನೀಡುತ್ತಿಲ್ಲವೆಂದು ದೂರಿದ್ದಾರೆ.

ಕೋಲಿ, ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ನೇತೃತ್ವದ ಪ್ರತಿಭಟನೆಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಭೀಮಶಾ ಖನ್ನಾ, ಹುಲಕಂಠರಾಯ್ ವಿಶ್ವಕರ್ಮ, ರಾಜಶೇಖರ್ ತಂದೆ ಮಲ್ಲಿನಾಥ್, ಆನಂದ್ ತಂದೆ ನಿಂಗಣ್ಣ, ಶರಣಪ್ಪ ಪೂಜಾರಿ ಗೌಡಗೊಂಡ್, ಶೇಖಪ್ಪ ಪೂಜಾರಿ, ಸೈಯದ್ ಸಾಬ್ ಮುಲ್ಲಾ, ದುರ್ಯೋಧನ್ ಕ್ಷೇತ್ರಿ, ಸೈಯದ್ ಮುಲ್ಲಾ, ಮೋಹನ್ ಅರಮನ್, ಹುಲೆಪ್ಪ ಮಾಳಗಿ, ಸಂಗಣ್ಣ ಹಡಪದ್, ಮಲ್ಲಿನಾಥ್ ಶೇಖಪ್ಪ ಸಾಂಬ್, ನಾಗೇಂದ್ರ ಕಲಶೆಟ್ಟಿ, ಮಲ್ಲಿನಾಥ್, ಮಲ್ಲಿನಾಥ್ ಟೇಲರ್, ನಿಂಗಪ್ಪ ಪೂಜಾರಿ, ಮರೆಪ್ಪ ಪೂಜಾರಿ, ಸುಭಾಷ್ ಬೋಚಿ, ಮಹೇಂದ್ರ ಚಂದ್ರಾಮ್ ಕ್ಯಾಸಾ ಇದ್ದರು.

Share this article