ಗ್ರಾಹಕರಿಗೆ ಶಾಕ್‌ ಕೊಡಲು ಹೆಸ್ಕಾಂ ಸಿದ್ಧತೆ!

KannadaprabhaNewsNetwork |  
Published : Jan 23, 2026, 02:45 AM IST
ಬಲ್ಬ್‌ | Kannada Prabha

ಸಾರಾಂಶ

ಕೆಇಆರ್‌ಸಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2024-25ರಲ್ಲಿ ಯಾವ ರೀತಿ ನಷ್ಟವಾಗಿದೆ. ವಿದ್ಯುಚ್ಛಕ್ತಿ ಮಾರಾಟದಿಂದ ಬಂದಿರುವ ಲಾಭ, ಖರೀದಿಯಿಂದ ಆಗಿರುವ ನಷ್ಟ, ಆಗಿರುವ ಖರ್ಚು ವೆಚ್ಚಗಳೆಷ್ಟು? ಎಂಬುದರ ಕುರಿತು ಮಾಹಿತಿ ತಿಳಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಹೆಸ್ಕಾಂ ಕಳೆದ ಆರ್ಥಿಕ ವರ್ಷ (2024-25) ದಲ್ಲಿ ಬರೋಬ್ಬರಿ ₹ 604 ಕೋಟಿ ನಷ್ಟವನ್ನು ಅನುಭವಿಸಿದೆ. ಇದನ್ನು ಗ್ರಾಹಕರ ಮೇಲೆ ಹಾಕಬಹುದು ಎಂಬ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ (ಕೆಇಆರ್‌ಸಿ)ಕ್ಕೆ ಸಲ್ಲಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಮತ್ತೆ ಶಾಕ್‌ ನೀಡಲು ಹೆಸ್ಕಾಂ ಮುಂದಾಗಿದೆ.

ಹಾಗಂತ ವಿದ್ಯುಚ್ಛಕ್ತಿ ದರ ಏರಿಸಿ ಎಂದು ಕೇಳಿಲ್ಲ. ಆದರೆ, ನಷ್ಟವುಂಟಾಗಿದೆ. ಇದನ್ನು ಗ್ರಾಹಕರ ಮೇಲೆ ಹಾಕಬಹುದು ಎಂದು ಸಲಹೆಯನ್ನು ಪ್ರಸ್ತಾವನೆಯಲ್ಲಿ ತಿಳಿಸಿದೆ. ಈ ಮೂಲಕ ದರ ಏರಿಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಇದಕ್ಕೆ ಫೆ.4ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಆಕ್ಷೇಪಣೆಗಳನ್ನು ಕೆಇಆರ್‌ಸಿ ಪರಿಶೀಲಿಸಿ ವಿಚಾರಣೆ ಮಾಡಿ ವಿದ್ಯುಚ್ಛಕ್ತಿ ದರ ಏರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಆದರೆ, ಏರಿಸಬಹುದು ಎಂಬ ಸೂಚ್ಯವಾಗಿ ತಿಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.

ಹೇಗೆ ನಷ್ಟ?:

ತನ್ನ ಪ್ರಸ್ತಾವನೆಯಲ್ಲಿ 2024-25ರಲ್ಲಿ ಯಾವ ರೀತಿ ನಷ್ಟವಾಗಿದೆ. ವಿದ್ಯುಚ್ಛಕ್ತಿ ಮಾರಾಟದಿಂದ ಬಂದಿರುವ ಲಾಭ, ಖರೀದಿಯಿಂದ ಆಗಿರುವ ನಷ್ಟ, ಆಗಿರುವ ಖರ್ಚು ವೆಚ್ಚಗಳೆಷ್ಟು? ಎಂಬುದರ ಕುರಿತು ಮಾಹಿತಿ ತಿಳಿಸಿದೆ. ವಿದ್ಯುಚ್ಛಕ್ತಿ ಮಾರಾಟ ಮಾಡಲು 13109.89 ಮೀಲಿಯನ್‌ ಯುನಿಟ್‌ ಅನುಮೋದನೆ ಸಿಕ್ಕಿತ್ತು. ಇದರಿಂದ ₹ 11,388.68 ಕೋಟಿ ಆದಾಯದ ನಿರೀಕ್ಷೆಯಿತ್ತು. ಆದರೆ, ಬೇಡಿಕೆಗಳಿಗನುಣವಾಗಿ 13972.36 ಮೀ.ಯು ಮಾರಾಟವಾಗಿದೆ. ಅಂದರೆ ಹೆಚ್ಚಿಗೆ ವಿದ್ಯುಚ್ಛಕ್ತಿ ಮಾರಾಟವಾಗಿದ್ದು, ಇದರಿಂದ ₹ 12315.26 ಕೋಟಿ ಆದಾಯವಾಗಿದೆ. ಇದೇ ವೇಳೆ ಪ್ರಸರಣ ಶುಲ್ಕ ಸೇರಿದಂತೆ ವಿದ್ಯುತ್‌ ಖರೀದಿಗೆ ₹ 9039.37 ಕೋಟಿ ಅನುಮೋದನೆ ಸಿಕ್ಕಿತ್ತು. ಆದರೆ ಖರ್ಚಾಗಿದ್ದು ₹ 9504.51 ಕೋಟಿ ಆಗಿದೆ. ಇನ್ನು ದುರಸ್ತಿ ಮತ್ತು ನಿರ್ವಹಣೆಯಲ್ಲೂ ₹ 1686.99 ಕೋಟಿ ಆಗಬೇಕಿತ್ತು. ಆಗಿದ್ದು ₹ 1923.47 ಕೋಟಿ. ಸವಕಳಿಗೆ ₹ 393.26 ಕೋಟಿ ನಿಗದಿಪಡಿಸಿದ್ದರೆ ₹ 549.84 ಕೋಟಿ ಖರ್ಚಾಗಿದೆ. ಬಡ್ಡಿ ಮತ್ತು ಹಣಕಾಸು ಶುಲ್ಕಗಳು ₹ 638.38 ಕೋಟಿ ನಿಗದಿಯಾಗಿತ್ತು. ಖರ್ಚಾಗಿದ್ದು ₹ 686.39 ಕೋಟಿ. ಇನ್ನು ರಿಟರ್ನ್‌ ಆನ್‌ ಈಕ್ವಿಟಿ ₹ 422.85 ಕೋಟಿ ಕೇಳಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ₹11,335.60 ನಿಗದಿಯಾಗಿದ್ದರೆ, ಖರ್ಚಾಗಿದ್ದು ₹12,919.75 ಕೋಟಿ. ಈ ಕಾರಣದಿಂದಾಗಿ ₹ 604.49 ಕೋಟಿ ನಷ್ಟವುಂಟಾಗಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಆದಕಾರಣ ನಿವ್ವಳ ಆದಾಯದಲ್ಲಿ ಕೊರತೆಯಾಗಿರುವ ₹ 604 ಕೋಟಿಯನ್ನು ಗ್ರಾಹಕರಿಗೆ ವರ್ಗಾಯಿಸಬಹುದು ಎಂದೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ದರ ಹೆಚ್ಚಳಕ್ಕೆ ಪರೋಕ್ಷವಾಗಿ ಸಲಹೆ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮೊದಲೇ ಜೀವನ ವೆಚ್ಚ ದುಬಾರಿಯಾಗುತ್ತಿದೆ. ಇಂಧನ ದರ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನಲುಗುತ್ತಿರುವ ಸಾಮಾನ್ಯ ಗ್ರಾಹಕರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹಾಕುವುದು ಸರಿಯಲ್ಲ. ಆದಕಾರಣ ಯಾವುದೇ ಕಾರಣಕ್ಕೂ ವಿದ್ಯುತ್‌ ದರ ಹೆಚ್ಚಿಸಬಾರದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಗ್ರಹಿಸಿದೆ.

ಒಟ್ಟಿನಲ್ಲಿ ವಿದ್ಯುತ್‌ ದರ ಹೆಚ್ಚಳವನ್ನೇನೋ ಇನ್ನು ಮಾಡಿಲ್ಲ. ಕೆಇಆರ್‌ಸಿ ಮುಂದೆ ಏನು ಮಾಡುತ್ತದೆಯೋ ಗೊತ್ತಿಲ್ಲ. ಆದರೆ ದರ ಏರಿಸಬಹುದು ಎಂಬ ಸೂಚ್ಯವಾಗಿ ತಿಳಿಸಿರುವುದಂತೂ ಸತ್ಯ.ಸರ್ಕಾರ ಮತ್ತು ಹೆಸ್ಕಾಂ ಆಡಳಿತವು ಪರ್ಯಾಯ ಆದಾಯ ಮೂಲಗಳನ್ನು ಹುಡುಕಿ, ನವೀಕರಿಸಬಹುದಾದ ಶಕ್ತಿ ಉತ್ಪಾದನೆ, ಉತ್ತಮ ಬಿಲ್ಲಿಂಗ್ ವ್ಯವಸ್ಥೆ ಹಾಗೂ ನಷ್ಟ ಕಡಿತ ಕ್ರಮಗಳ ಮೂಲಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಆದರೆ, ದರ ಹೆಚ್ಚಳ ಮಾಡಬಾರದು.

ಜಿ.ಕೆ. ಆದಪ್ಪಗೌಡರ, ಅಧ್ಯಕ್ಷರು, ವಾಣಿಜ್ಯೋದ್ಯಮ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ