
ಕನ್ನಡಪ್ರಭ ವಾರ್ತೆ, ತುಮಕೂರು
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಮಾಜಿ ಶಾಸಕರು ಧಾರ್ಮಿಕ ವಿಚಾರವನ್ನು ರಾಜಕಾರಣ ಮಾಡಿ ತಪ್ಪು ಮಾಹಿತಿ ನೀಡಿ ದೇವಿಯ ಭಕ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಲ್ಲದೆ ಮಾಜಿ ಶಾಸಕರ ಆಪ್ತರಾದ ಉದ್ಯಮಿ ಜಗದೀಶ್ ಆವರು ದೇವಸ್ಥಾನಕ್ಕೆ 30 ಲಕ್ಷ ರು. ದೇಣಿಗೆ ನೀಡಿರುವುದಾಗಿ ಹೇಳಿದ್ದಾರೆ. ಅವರ ಮಾತು ಸತ್ಯವಾಗಿದ್ದರೆ ದೇವಿಗೆ ಕರ್ಪೂರ ಬೆಳಗಿ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ದೇವಿಯ ತಾಳಿ ಕಳುವಾಗಿಲ್ಲ. 43 ಗ್ರಾಂ ಚಿನ್ನ ಕಳವಾಗಿದೆ. ಅದರಲ್ಲಿ 20 ಗ್ರಾಂ ಸಿಕ್ಕಿದೆ. ಆದರೆ ತಾಳಿ ಕಳವಾಗಿದೆ ಎಂದು ಮಾಜಿ ಶಾಸಕ ಗೌರಿಶಂಕರ್ ಹಾಗೂ ಅವರ ಆಪ್ತ ಜಗದೀಶ್ ಅವರು ಹೊಸ ತಾಳಿ ತಂದು ತಹಸೀಲ್ದಾರರ ಸಮ್ಮುಖದಲ್ಲಿ ದೇವಿಗೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ತಾಳಿ ಕಳವಾಗಿಲ್ಲ ಎಂದು ತಹಸೀಲ್ದಾರರು ಸ್ಪಷ್ಟನೆ ನೀಡಬೇಕಾಗಿತ್ತು. ಆದರೂ ಆವರು ಏಕೆ ಹೇಳಲಿಲ್ಲ ಎಂದು ಗೊತ್ತಾಗಲಿಲ್ಲ ಎಂದರು.ದೇವರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ, ದೇವಿಗೆ ತಾಳಿ ಸಮೇತ ಏನೇನು ಆಭರಣ ಬೇಕು ಎಂಬುದನ್ನು ಕೊಡುವ ಭಕ್ತರು ಸಾಕಷ್ಟು ಜನರಿದ್ದಾರೆ. ಜಗದೀಶ್ ಅವರು ದೇವಿಗೆ ಕೊಡುವ ದೇಣಿಗೆ ಬಗ್ಗೆ ತಮ್ಮದೇನು ತಕರಾರಿಲ್ಲ, ಆದರೆ ಸುಳ್ಳು ಸುದ್ದಿ ಹರಡಿ ದೇವರ ವಿಚಾರದಲ್ಲಿ ಅಪಚಾರ ಮಾಡಬಾರದು ಎಂದು ತಿಮ್ಮೇಗೌಡರು ಹೇಳಿದರು.
ಉದ್ಯಮಿ ಜಗದೀಶ್ ಅವರು 30 ಲಕ್ಷ ರು ದೇಣಿಗೆ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಆದರೆ ಅವರು ನೀಡಿರುವುದು 7.35 ಲಕ್ಷ ರು. ಆದರೆ, ಅಲ್ಲೇ ಇದ್ದ ಜಗದೀಶ್ ಆವರೂ ಮಾಜಿ ಶಾಸಕರ ಹೇಳಿಕೆಯನ್ನು ನಿರಾಕರಿಸಲಿಲ್ಲ ಹಾಗೂ ಅವರ ಹೇಳಿಕೆ ಸರಿಪಡಿಸುವ ಪ್ರಯತ್ನ ಮಾಡಲಿಲ್ಲ. ದೇವಸ್ಥಾನಕ್ಕೆ ಯಾರೇ ದೇಣಿಗೆ ನೀಡಿದರೂ ದಾಖಲೆ ಇರುತ್ತದೆ. ಜಗದೀಶ್ ಅವರು ತಾವು ಕೊಟ್ಟರುವ ಬಗ್ಗೆ ದಾಖಲೆ ಒದಗಿಸಲಿ. ಆದಿಶಕ್ತಿ ಮಾರಮ್ಮನ ಮುಂದೆ ಸುಳ್ಳು ಹೇಳಬಾರದು. ಎಷ್ಟೇ ಹಣ ಖರ್ಚಾದರೂ ನಾವು ದೇವಸ್ಥಾನ ರಾಜಗೋಪುರ ನಿರ್ಮಾಣಕ್ಕೆ ದೇಣಿಗೆ ನೀಡುತ್ತೇವೆ ಎಂದು ಮಾಜಿ ಶಾಸಕರು ಹೇಳಿದ್ದಾರೆ, ಆದರೆ ಈಗಾಗಲೇ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಹೇಳಿದರು. ಸಮಿತಿ ಸದಸ್ಯರಾದ ಹನುಂತರಾಯಪ್ಪ, ಮಾಯಣ್ಣ, ಗಿರೀಶ್, ಜಗದೀಶ್, ರವಿಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ವೆಂಕಟೇಶ್, ಶಂಕರಣ್ಣ, ರಾಕೇಶ್ ಮೊದಲಾದವರಿದ್ದರು.