27ಕ್ಕೆ ಹೈಟೆಕ್‌ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

KannadaprabhaNewsNetwork |  
Published : Jul 19, 2025, 02:00 AM IST
ಜುಲೈ 27ರಂದು ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ: ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್, ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಜು.27ರಂದು ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆಯಾಗಲಿದೆ ಎಂದು ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್, ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಜು.27ರಂದು ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆಯಾಗಲಿದೆ ಎಂದು ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಂಗಳೂರು ಬೇಲಿಮಠದ ಡಾ.ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ವಹಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಟೆಕ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದರು.

ಈ ಹೈಟೆಕ್ ಆಯುರ್ವೇದ ಆಸ್ಪತ್ರೆಯಲ್ಲಿ ಸುಸಜ್ಜಿತ ಪಂಚಕರ್ಮ, ನೇತೃ ಕ್ರಿಯಾಕಲ್ಪ ಒಳಗೊಂಡ ವಿವಿಧ ಆಯುರ್ವೇದ ಪದ್ದತಿಯ ಚಿಕಿತ್ಸೆಗಳು ದೊರಯಲಿವೆ. ಜೊತೆಗೆ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ಪದ್ಧತಿಯ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯವು ವಿಜಯಪುರದ ದಕ್ಷಿಣ ಭಾಗದ ಜನತೆಗೆ ದೊರೆಯಲು ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ವಿಸ್ತರಣಾ ಘಟಕ ನಿರ್ಮಿಸಲಾಗಿದೆ. ಇಲ್ಲಿ ಮೆಡಿಸಿನ್, ಸರ್ಜರಿ, ಪೆಡಿಯಾಟ್ರಿಕ್, ಗೈನಕಾಲಜಿ, ಅರ್ಥೋಪೆಡಿಕ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್ ಕಾರ್ಯನಿರ್ವಹಿಸಲಿವೆ. ಬಿ.ಎಂ.ಪಾಟೀಲ ಫೌಂಡೇಶನ್‌ನಿಂದ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಇಲ್ಲಿ ಹೊಸ ಆಲೋಚನೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ಕೈಗಾರಿಕೆಗಳ ಸಹಭಾಗಿತ್ವ ಕಲ್ಪಿಸುವ ವೇದಿಕೆಯಾಗಿದೆ. ಇಲ್ಲಿ ನಿರಂತರ ಕಲಿಕೆ, ಕಾರ್ಯಾಗಾರಗಳು ಕೈಗಾರಿಕೆಗಳ ಸಹಯೋಗದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈಗಾಗಲೇ 1200 ವಿದ್ಯಾರ್ಥಿಗಳನ್ನು ಪೈಲೆಟ್ ಪ್ರೊಗ್ರಾಮ್‌ನಲ್ಲಿ ತೊಡಗಿಸಿದ್ದು, ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, 450 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾನ್ಯತೆ ದೊರೆತಿದೆ. ಇನ್ನೊಂದೆಡೆ ಬಿಎಲ್‌ಡಿಇ ಸಂಸ್ಥೆಯಿಂದ ಸುಮಾರು ₹ 100 ಕೋಟಿ ವೆಚ್ಚದಲ್ಲಿ 100 ಬೆಡ್‌ನ ಕ್ಯಾನ್ಸರ್ ಹಾಸ್ಪಿಟಲ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ರೋಗಿಗಳ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದರು.

ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜು, ಸಂಗನಬಸವ ಮಹಾಸ್ವಾಮಿಜಿ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಬಿಎಲ್‌ಡಿಇ ಅಲೆನ್ ಕರಿಯರ್ ಅಕಾಡೆಮಿಗಳು ವಿವಿಧ ಸಾಧನೆಗಳನ್ನು ಮಾಡಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರ್‍ಯಾಂಕಿಂಗ್ ಪಡೆದಿವೆ ಎಂದರು.

ಸಮಕುಲಾಧಿಪತಿ‌ ಡಾ.ವೈ.ಎಂ.ಜಯರಾಜ, ಕುಲಪತಿ ಡಾ.ಅರುಣ ಇನಾಮದಾರ, ರಜಿಸ್ಟ್ರಾರ್ ಡಾ.ಆರ್‌.ವಿ.ಕುಲಕರ್ಣಿ, ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಮಾತನಾಡಿದರು. ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಶೆಟ್ಟಿ, ಡಾ.ಅಶೋಕ ಪಾಟೀಲ, ಪಿ.ಮಂಜುನಾಥ, ಆಸ್ಪತ್ರೆಯ‌ ವೈದ್ಯಕೀಯ ಅಧೀಕ್ಷಕ‌ ಡಾ.ರಾಜೇಶ ಹೊನ್ನುಟಗಿ, ಡಾ.‌ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

-----

ಕೋಟ್‌

ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಏಜ್ಯುಕೇಶನಲ್ ಅಸೋಸಿಯೇಶನ್ 115 ವರ್ಷಗಳ ದೀರ್ಘ ಪ್ರಯಾಣದಲ್ಲಿ ಶಿಕ್ಷಣ ದಾಸೋಹಿ ಬಂಥನಾಳ ಸಂಗಬಸವ ಮಹಾಶಿವಯೋಗಿಗಳು, ಮುತ್ಸದ್ದಿ ನಾಯಕರಾದ ಬಿ.ಎಂ.ಪಾಟೀಲರ ದೂರದೃಷ್ಟಿಯ ಫಲ ಈ ಭಾಗದ ಎಲ್ಲರಿಗೂ ಶಿಕ್ಷಣ ದೊರೆಯುವ ಮೂಲ ಉದ್ದೇಶವಿದೆ. ಜೊತೆಗೆ ಆಧುನಿಕ ಈ ವರ್ಷಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಬಿಎಲ್‌ಡಿಇ ಸಂಸ್ಥೆಯಲ್ಲಿ 4500 ವಿವಿಧ ಸಿಬ್ಬಂದಿ ಸಹಯೋಗದಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ, ವಿವಿಧ ತಾಂತ್ರಿಕ ಶಿಕ್ಷಣ, ಕಲೆ ವಿಜ್ಞಾನ, ವಾಣಿಜ್ಯ, ವ್ಯವಹಾರ ಸೇರಿ ವಿವಿಧ ಕಾಲೇಜುಗಳಲ್ಲಿ 36000 ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ.

ಎಂ.ಬಿ.ಪಾಟೀಲ, ಅಧ್ಯಕ್ಷರು, ಬಿಎಲ್‌ಡಿಇ ಸಂಸ್ಥೆ--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ