ರಾಜಾಸೀಟಿನಲ್ಲಿ ಹೈಟೆಕ್‌ ಕ್ಯಾಂಟೀನ್‌ ಸ್ಥಾಪನೆ: ಮಂತರ್ ಗೌಡ

KannadaprabhaNewsNetwork |  
Published : Jan 26, 2026, 04:00 AM IST
ಚಿತ್ರ : 24ಎಂಡಿಕೆ4 : ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಾದ ಡಾ.ಮಂತರ್ ಗೌಡ ಚಾಲನೆನೀಡಿದರು.  | Kannada Prabha

ಸಾರಾಂಶ

ರಾಜಸೀಟು ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ತೋಟಗಾರಿಕೆ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಪ್ರಯುಕ್ತ ನಗರದ ರಾಜಸೀಟು ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು ರಾಜಸೀಟು ಉದ್ಯಾನವನದ ಒಳಭಾಗದಲ್ಲಿ ಹೈಟೆಕ್ ಮಾದರಿಯ ಕ್ಯಾಂಟೀನ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ರಾಜಸೀಟು ಉದ್ಯಾನವನಲ್ಲಿ ಈ ಬಾರಿ ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವುದು ಆಕರ್ಷಣಿಯವಾಗಿದೆ. ಮಕ್ಕಳಿಗಾಗಿ ಕನ್ನಡ ಅಕ್ಷರ ಮಾಲೆಯ ಪುಷ್ಪ ಪ್ರದರ್ಶನ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು. ರಾಜಸೀಟು ಉದ್ಯಾನವನದಲ್ಲಿ ವರ್ಷಕ್ಕೊಮ್ಮೆ ಬದಲಾಗಿ ವಿಶೇಷ ಸಂದರ್ಭಗಳಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ರಾಜಸೀಟು ಉದ್ಯಾನವನ್ನು ಮತ್ತಷ್ಟು ಆಕರ್ಷಣೀಯ, ಹಸಿರುಮಯವನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಸಲಹೆ ಮಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ಸರ್ವೋದಯ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ರಾಜೀವ್ ಗಾಂಧಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ತೆನ್ನಿರ ಮೈನಾ, ಅಂಬೆಕಲ್ಲು ನವೀನ್, ನಗರಸಭೆ ಸದಸ್ಯರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ, ಹಿರಿಯ ಸಹಾಯಕ ನಿರ್ದೇಶಕರಾದ ಫಣಿಂದ್ರ, ಸಹಾಯಕ ನಿರ್ದೇಶಕ ಮುತ್ತಪ್ಪ ಇತರರು ಇದ್ದರು.

ನೋಡುಗರನ್ನು ಆಕರ್ಷಿಸುವ ಫಲಪುಷ್ಪಗಳು:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 8 ಸಾವಿರ ಕುಂಡಗಳಲ್ಲಿ ವಿವಿಧ ವರ್ಗದ ಹೂವುಗಳು ಹಾಗೂ ಬೆಡ್‍ಗಳಲ್ಲಿ ಸುಮಾರು 20 ಸಾವಿರ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಪುಷ್ಪ ಪ್ರದರ್ಶಿಸಲಾಗಿದೆ.

ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು:

ಕೊಡಗಿನ ಪ್ರಸಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನದ ಕಲಾಕೃತಿಯನ್ನು 33 ಅಡಿ ಎತ್ತರದಲ್ಲಿ 18 ಅಡಿ ಉದ್ದ, 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ವರ್ಗದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿರುವುದು ಆಕರ್ಷಣಿಯವಾಗಿದೆ.

ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರಗಳ ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು ಎದ್ದು ಕಾಣುತ್ತಿದೆ.

ಸಂಗೀತ ಕಲಾಕೃತಿಗಳಾದ ತಬಲಾ, ಪಿಯಾನೊ, ಹರ್ಪ್ ಕಲಾಕೃತಿಯನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿರುವುದು ಪ್ರಮುಖ ಆಕರ್ಷಣೆ.

ಗಣರಾಜ್ಯೋತ್ಸವದ ಅಂಗವಾಗಿ ಅಮರ್ ಜವಾನ್ ಕಲಾಕೃತಿಯನ್ನು 8 ಅಡಿ ಎತ್ತರದಲ್ಲಿ ಕಲಾಕೃತಿಗಳನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.

ವಿವಿಧ ಕ್ಷೇತ್ರಗಳ ಗಣ್ಯರು ಗಳ ಕಲಾಕೃತಿಗಳನ್ನು ಹಣ್ಣು, ತರಕಾರಿಗಳಿಂದ ರಚಿಸಲಾಗಿದೆ. ವಿವಿಧ ಅಲಂಕಾರಿಕ, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಕಣ್ಮನ ಸೆಳೆಯುತ್ತಿದೆ.

ಹದಿನಾರು ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 8 ರಿಂದ 10 ಲಕ್ಷ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.

ಗಾಂಧಿ ಮೈದಾನದಲ್ಲಿ 60 ಕ್ಕೂ ಮಳಿಗೆ ತೆರೆಯಲಾಗಿದ್ದು, ತೋಟಗಾರಿಕೆ ಇಲಾಖೆಯ‌ ವಸ್ತು ಪ್ರದರ್ಶನ ಅತ್ಯಾಕರ್ಷಣಿಕವಾಗಿದೆ. 10 ತೋಟಗಾರಿಕೆ ಇಲಾಖೆ ಮಳಿಗೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಫ್‍ಕಾಮ್ಸ್, ಕೈಗಾರಿಕೆ, ವಾಣಿಜ್ಯ ಇಲಾಖೆ ಮಳಿಗೆಗಳಿವೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ರೈತರು ಬೆಳೆದಿರುವಂತಹ ವಿಶೇಷವಾದ ಹಣ್ಣು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಲಾರಲಿಂಗೇಶ್ವರ ಜಾತ್ರೆಗೆ ಚಾಲನೆ: ಉತ್ತರ ದಿಕ್ಕಿಗೆ ಉಕ್ಕಿ ಹರಿದ ಹಾಲು
ಸುಸಂಸ್ಕೃತರಾಗಿ ಬದುಕುವುದೇ ಹಿಂದುತ್ವ