ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜೆಸಿಆರ್ ಬಡಾವಣೆಗೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 4ರ ಸರ್ವೀಸ್ ರಸ್ತೆ ಪಕ್ಕದಲ್ಲಿಯೇ ಇದ್ದ ಲೋಕೋಪಯೋಗಿ ಇಲಾಖೆಯ ಹಳೇ ಕಟ್ಟಡವನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ಹೈಟೆಕ್ ಸ್ಪರ್ಷ ನೀಡಲಾಗಿದೆ. ವಿಶಾಲವಾದ ಹಾಲ್, ಸಿಬ್ಬಂದಿ ಕಾರ್ಯನಿರ್ವಹಿಸಲು ವಿಶಾಲವಾದ ಕೊಠಡಿ, ಮಹಡಿ ಮೇಲೊಂದು ವಿಶ್ರಾಂತಿ ತಾಣ. ಕಚೇರಿ ಆವರಣದಲ್ಲಿ ಐನೂರು ಕುರ್ಚಿಗಳ ಹಾಕಿ ಕಾರ್ಯಕ್ರಮ ಮಾಡಿಕೊಳ್ಳುವಷ್ಟು ವಿಶಾಲವಾದ ಜಾಗ ಇದೆ.
ಕಚೇರಿ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಈ ಮೊದಲು ಇದ್ದ ಕಚೇರಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿದ್ದು ಜನತೆಗೆ ಹೋಗಿ ಬರಲು ತೊಂದರೆ ಆಗುತ್ತಿತ್ತು. ಹಾಗಾಗಿ ಎಲ್ಲರಿಗೂ ಸಮೀಪವಾಗುವಂತೆ ಲೋಕೋಪಯೋಗಿ ಇಲಾಖೆ ಕಟ್ಟಡ ಪಡೆಯಲಾಗಿದೆ. ಕಾರ್ಯನಿರ್ವಹಿಸಲು ಪ್ರಶಾಂತವಾದ ಜಾಗ ಇದಾಗಿದೆ ಎಂದು ತಿಳಿಸಿದರು.ಲೋಕಸಭಾ ಅಧಿವೇಶನ ಮುಗಿದ ಬಳಿಕ ಕಳೆದ 20 ದಿನಗಳಿಂದ ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸುವ, ಅಭಿವೃದ್ಧಿಯ ದೃಷ್ಟಿಯಿಂದ ಹಲವು ಸಭೆಗಳನ್ನು ನಡೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್‍ರನ್ನು ಭೇಟಿ ಮಾಡಿ ಅನುದಾನ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.
ಚಿತ್ರದುರ್ಗದಿಂದ-ಚಳ್ಳಕೆರೆ-ಪಾವಗಡ ಮುಖಾಂತರ ಆಂಧ್ರಪ್ರದೇಶದ ಪೆನುಕೊಂಡವರೆಗಿನ ರಾಜ್ಯಹೆದ್ದಾರಿ 178ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡುವಂತೆ ಸಚಿವ ಘಡ್ಕರಿ ಅವರಲ್ಲಿ ಮನವಿ ಮಾಡಲಾಗಿದೆ. ಚಳ್ಳಕೆರೆ ನಗರ ಪರಿಮಿತಿಯಲ್ಲಿ 7ಕಿಮೀ ಉದ್ದದ ಹೆದ್ದಾರಿಯನ್ನು ನಾಲ್ಕು ಪಥವನ್ನಾಗಿ ಮಾಡಲು ಅನುದಾನ ಬಿಡುಗಡೆಗೆ ಕೋರಲಾಗಿದೆ.
ಪಾವಗಡ-ಮಡಕಶಿರಾ ಹೊಸ ಬ್ರಾಡ್‍ಗೇಜ್ ನಿರ್ಮಾಣಕ್ಕೆ ₹265 ಕೋಟಿ ಅನುದಾನ ಬಿಡುಗಡೆಯಾಗಿದೆ. ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ₹150 ಕೋಟಿ ಅನುದಾನ ಬಂದಿದೆ. ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಚಳ್ಳಕೆರೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡಲು 15 ಎಕರೆ ಸರ್ಕಾರಿ ಜಮೀನು ಹಾಗೂ ಚಿತ್ರದುರ್ಗ ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲು ಸುಮಾರು 5 ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸುಮಾರು ₹15 ಕೋಟಿ ರು. ಅನುದಾನವನ್ನು ಸೈನ್ಸ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ ಕಾಯ್ದಿರಿಸಲಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.