ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಲೆಗೆ ವಿರುದ್ಧವಾದ ನಡವಳಿಕೆ ತೋರಿದ್ದಕ್ಕೆ ವಿಧಿಸಿದ್ದ ₹10 ಸಾವಿರ ದಂಡ ಹಾಗೂ ಮುಚ್ಚಳಿಕೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಒಂಬತ್ತನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡದ ಮಲ್ಲೇಶ್ವರದ ಬ್ರಿಗೇಡ್ ಗೇಟ್‌ವೇ ಎನ್‌ಕ್ಲೇವ್‌ನಲ್ಲಿನ ಬ್ರಿಗೇಡ್ ಶಾಲೆಗೆ ಹೈಕೋರ್ಟ್ ₹1 ಲಕ್ಷ ದಂಡ ವಿಧಿಸಿದೆ.ಶಾಲೆ ಬಾಲಕಿಯೊಬ್ಬಳ ಪೋಷಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ‘ಶಾಲೆ ಈ ರೀತಿಯ ಬೇಡಿಕೆ ಇಡುವುದು ಸಮರ್ಪಕ ಹೌದೋ ಅಲ್ಲವೊ ಎಂಬುದು ಒತ್ತಟ್ಟಿಗಿರಲಿ, ಆದರೆ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ಕೊಡದಿದ್ದರೆ ಹೇಗೆ’ ಎಂದು ಕಳವಳ ವ್ಯಕ್ತಪಡಿಸಿತು. ಜೊತೆಗೆ ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಆಗಿದ್ದೇನು?:ಶಾಲಾ ನೀತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ₹10 ಸಾವಿರ ದಂಡ ವಿಧಿಸಿದ್ದ ಶಾಲೆ ಈ ಬಗ್ಗೆ ನ.22ರಂದು ನೊಟೀಸ್ ನೀಡಿದೆ. ಅಲ್ಲದೆ, ಮುಚ್ಚಳಿಕೆ ನೀಡುವಂತೆ ತಿಳಿಸಿ, ತಪ್ಪಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದೆ ಎಂದು ಬಾಲಕಿ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಡಿ.6ರಂದು ಈ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಶಾಲೆಯ ಆದೇಶಕ್ಕೆ ತಡೆ ಸೂಚಿಸಿ ವಿದ್ಯಾರ್ಥಿನಿಗೆ ತರಗತಿಗೆ ಪ್ರವೇಶಕ್ಕೆ ಅವಕಾಶ ನೀಡುವಂತೆ ತಿಳಿಸಿತ್ತು. ಆದರೆ, ನ್ಯಾಯಾಲಯದ ಆದೇಶ ಹೊರತಾಗಿಯೂ ಶಾಲೆ ವಿದ್ಯಾರ್ಥಿನಿಗೆ ತರಗತಿಗೆ ಪ್ರವೇಶ ಕೊಡುತ್ತಿಲ್ಲ ಎಂದು ಬಾಲಕಿ ತಂದೆ ಡಿ.22ರಂದು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದೇ ರೀತಿ 50 ವಿದ್ಯಾರ್ಥಿಗಳು ಕೂಡ ತರಗತಿಗೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಲಾಯಿತು.ಆದರೆ, ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿತು.
ವಾದ ಆಲಿಸಿದ ನ್ಯಾಯಾಲಯ, 9 ಮತ್ತು 10ನೇ ತರಗತಿ ಶಿಕ್ಷಣದ ಪ್ರಮುಖ ಘಟ್ಟಗಳಾಗಿವೆ ಎಂಬುದಾಗಿ ತಿಳಿದಿರುವ ಪೋಷಕರು, ಯಾವುದೇ ತರಗತಿಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿರುತ್ತಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಭವಿಷ್ಯದಲ್ಲಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಇತರೆ ಯಾವುದೇ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯದೊಂದಿಗೆ ಆಟವಾಡುವುದಕ್ಕೆ ಮುಂದಾಗಬಾರದು ಎಂದು ತಿಳಿಸಿತು.