ಹಾವೇರಿ ನಗರದ ಸಜ್ಜನರ್ ಫಂಕ್ಷನ್ ಹಾಲ್‌ನಲ್ಲಿ ಬಜ್ ಇಂಡಿಯಾ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬಜ್ ಹಬ್ಬ ಮಹಿಳಾ ಸಬಲೀಕರಣ ಮತ್ತು ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಹಾವೇರಿ: ಸಮಾಜದಲ್ಲಿ ಸ್ವಾವಲಂಬಿಯಾಗಿ ಉನ್ನತಿ ಸಾಧಿಸಬೇಕಾದರೆ ಮಹಿಳೆಯು ಮನಸ್ಸು ಮಾಡಬೇಕು. ಇಚ್ಛಾಶಕ್ತಿಯಿಂದ ಪರಿಶ್ರಮಪಟ್ಟರೆ ಉನ್ನತ ಮಟ್ಟಕ್ಕೆ ಏರುತ್ತಾಳೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇವತಿ ಹೊಸಮಠ ಹೇಳಿದರು.
ನಗರದ ಸಜ್ಜನರ್ ಫಂಕ್ಷನ್ ಹಾಲ್‌ನಲ್ಲಿ ಬಜ್ ಇಂಡಿಯಾ ಟ್ರಸ್ಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬಜ್ ಹಬ್ಬ ಮಹಿಳಾ ಸಬಲೀಕರಣ ಮತ್ತು ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .ಮಹಿಳೆಯು ತನ್ನ ಹಕ್ಕುಗಳನ್ನು ಪಡೆದುಕೊಂಡು ಸಮರ್ಥವಾಗಿ ಬೆಳವಣಿಗೆ ಹೊಂದಬೇಕಿದೆ. ಸಮಾಜದಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವ ಅವಕಾಶವಿದ್ದಾಗ ಮಾತ್ರ ಸ್ವಾತಂತ್ರಕ್ಕೆ ನೈಜ ಅರ್ಥ ಕಲ್ಪಿಸಿದಂತಾಗುತ್ತದೆ. ಮನುಕುಲಕ್ಕೆ ಅದರಲ್ಲೂ ವಿಶೇಷವಾಗಿ ಸ್ತ್ರೀ ಕುಲಕ್ಕೆ ಮಾರಕವಾಗಿರುವ ಬಹುದೊಡ್ಡ ಕಂಟಕಗಳಲ್ಲೊಂದಾದ ಬಾಲ್ಯವಿವಾಹ ನಡೆಯದಂತೆ ಮಹಿಳೆಯರು ಜಾಗ್ರತರಾಗಬೇಕು ಹಾಗೂ ಇತರರಿಗೂ ಸೂಕ್ತ ತಿಳಿವಳಿಕೆ ಹಾಗೂ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಜ್ ಸಂಸ್ಥೆಯ ವ್ಯಾಪಾರ ವ್ಯವಸ್ಥಾಪಕಿ ಲೇಖಾ, ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಪ್ರಭಾವತಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗೀತಾ ಬೆಳಗಾವಿ ಮಾತನಾಡಿದರು. ಬಜ್ ಗೆಳತಿಯರಾದ ಅಕ್ಕಮ್ಮ ಹೊನ್ನತ್ತಿ, ರೇಖಾ, ನಿರ್ಮಲಾ ಕೆಂಚನಗೌಡ್ರ, ಸರ್ವಮಂಗಳಾ ಶೆಟ್ಟರ್ ಅವರು ಸಂಸ್ಥೆಯ ಜೊತೆಗಿನ ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡರು.
ವಲಯ ವ್ಯವಸ್ಥಾಪಕ ನಿರಂಜನ ಟಿ., ಜಿಲ್ಲಾ ವ್ಯವಸ್ಥಾಪಕ ರುದ್ರೇಶ ಕೆ.ಎಂ., ಚಂದ್ರಪ್ಪ ವಿ., ದರ್ಶನ ಡಿ., ರಾಜು ಗೋಣೆಪ್ಪನವರ, ಅನುಷಾ ಎಸ್.ಎಂ., ದೀಪಾ ಜಾಡರ, ಮಂಜು ಹರಿಜನ, ಮಾರುತಿ ಎಂ.ಪಿ., ನೇತ್ರಾ ಪಾಟೀಲ ಸೇರಿದಂತೆ ಗೆಳತಿಯರು, ವ್ಯಾಪಾರಿಗಳು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ರೇಣುಕಾ ಕಹಾರ ನಿರೂಪಿಸಿದರು. ಮಾರುತಿ ಹರಿಜನ ಸ್ವಾಗತಿಸಿದರು. ಅರ್ಚನಾ ದೇವತಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.