ಕನ್ನಡಪ್ರಭ ವಾರ್ತೆ ಬೆಂಗಳೂರು
ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಕ್ರಮದಿಂದ ಕಳಂಕಿತ ಸಹಾಯಕ ಎಂಜಿನಿಯರ್‌ಗಳ ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಕ್ರಮ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಸಹಾಯಕ ಎಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಎಲ್ಲ ಪ್ರಕ್ರಿಯೆಗಳ ಮಾಹಿತಿಯನ್ನು ಬುಧವಾರ ಸರ್ಕಾರ ಮತ್ತು ಕೆಪಿಎಸ್‌ಸಿ ಬುಧವಾರ ನ್ಯಾಯಾಲಯಕ್ಕೆ ಒದಗಿಸಬೇಕು. ಒಂದು ಲಾರಿ ತೆಗೆದುಕೊಂಡು ಹೋಗಿ ದಾಖಲೆಗಳನ್ನು ತಂದು ಇಟ್ಟುಕೊಂಡು ಬಿಡಿ. ಕಾಲಹರಣ ಮಾಡಬಾರದು. ನ್ಯಾಯಾಲಯ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿರಬೇಕು ಎಂದು ಸರ್ಕಾರ ಮತ್ತು ಕೆಪಿಎಸಿ ಪರ ವಕೀಲರಿಗೆ ನ್ಯಾಯಪೀಠ ತಾಕೀತು ಮಾಡಿತು.ನೇಮಕಾತಿಯಲ್ಲಿ ಅಕ್ರಮಗಳು ನಡೆಯುವುದು ಹೇಗೆ ಗೊತ್ತೇ? ನಾವು ಏನು ಮಾಡಿದರೂ ನಡೆದು ಹೋಗುತ್ತದೆ ಎಂಬ ಸೊಕ್ಕಿನ ನಡತೆಯಿಂದಷ್ಟೆ. ಆ ನಡತೆಯನ್ನು ಸಂಬಂಧಪಟ್ಟವರು ತಕ್ಷಣವೇ ಬಿಡಬೇಕು. ಅಲೆಕ್ಸಾಂಡರ್‌ನಂತವನು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದಾನೆ. ಇತಿಹಾಸ ಓದಿದರೆ ಅದೆಲ್ಲಾ ತಿಳಿಯುತ್ತದೆ. ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದರೆ ನ್ಯಾಯಾಲಯ ಸಹ ಸುಮ್ಮನೆ ಬಿಡುವುದಿಲ್ಲ. ನ್ಯಾಯಾಲಯವು ಏನು ಮಾಡಿದರೂ ನಡೆಯುತ್ತದೆ. ಸಂಬಂಧಪಟ್ಟಿವರಿಗೆ ಗಂಭೀರ ಹಾನಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಸಿಒಡಿ-ಸಿಐಡಿಯಿಂದ ಏನೂ ಮಾಡಲಾಗುವುದಿಲ್ಲ. ಆ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಪ್ರಕರಣವನ್ನು ಸಿಬಿಐಯಿಂದ ತನಿಖೆ ಮಾಡುವುದು ಸೂಕ್ತ. ಆ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು.
ವಿಚಾರಣೆಯ ಒಂದು ಹಂತದಲ್ಲಿ ಕೆಪಿಎಸ್‌ಸಿ ಪರ ವಕೀಲ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೊಬೆನ್ ಜಾಕಬ್, ಸಹಾಯಕ ಎಂಜಿನಿಯರ್ ನೇಮಕಾತಿಯಲ್ಲಿನ ಹಗರಣದ ತನಿಖೆಗಾಗಿ ಕೆಪಿಎಸ್‌ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು 2024ರ ಫೆ.9ರಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಲಾಗಿತ್ತು. ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ನಿರ್ಣಯದ ಮೂಲಕ ಕೆಪಿಎಸ್‌ಸಿ ತಿಳಿಸಿತ್ತು. ಆದರೆ, ಅವರು ಎಫ್‌ಐಆರ್ ದಾಖಲಿಸಿರಲಿಲ್ಲ ಎಂದು ವಿವರಿಸಿದರು.