ಬಣ್ಣದೋಕುಳಿಯಲ್ಲಿ ಮಿಂದೆದ್ದ ಲಕ್ಷ್ಮೇಶ್ವರ ಜನತೆ

KannadaprabhaNewsNetwork |  
Published : Mar 19, 2025, 12:30 AM IST
ಪೊಟೋ- ಪಟ್ಟಣದಲ್ಲಿ ರಂಗಪಂಚಮಿಯ ಅಂಗವಾಗಿ ನಡೆದ ಹೋಳಿ ಹಬ್ಬದ ವಿವಿಧ ದೃಶ್ಯಗಳು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಂಗಳವಾರ ರಂಗಪಂಚಮಿಯ ಅಂಗವಾಗಿ ಪಟ್ಟಣದ ಜನತೆಯು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಂಗಳವಾರ ರಂಗಪಂಚಮಿಯ ಅಂಗವಾಗಿ ಪಟ್ಟಣದ ಜನತೆಯು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಪಟ್ಟಣದ ವಿವಿಧ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿ ಕಾಮನ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಣ್ಣದೋಕುಳಿಯಾಡುತ್ತ ಸಂಭ್ರಮಿಸಿ ನಂತರ ಕಾಮದಹನ ಮಾಡಲಾಯಿತು.

ಯುವಕರು ವಿವಿಧ ರೀತಿಯ ವೇಷಭೂಷಣ ಧರಿಸಿ ರಂಗಪಂಚಮಿಯನ್ನು ಸಡಗರದಿಂದ ಆಚರಿಸಿದ್ದು ಕಂಡು ಬಂದಿತು. ಯುವತಿಯರು ಯುವಕರಿಗಿಂತ ನಾವೇನು ಕಮ್ಮಿ ಇಲ್ಲವೆಂಬಂತೆ ಓಕುಳಿಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ಪಟ್ಟಣದ ಹಳ್ಳದಕೇರಿಯ ಓಣಿಯಲ್ಲಿ ಪಿಎಸ್‌ಐ ನಾಗರಾಜ ಗಡದ ರಂಗಪಂಚಮಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ರಂಗಪಂಚಮಿಯ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಬೇಕು. ಹಿಂದೂ ಧರ್ಮದಲ್ಲಿ ಹೋಳಿ ಹಬ್ಬಕ್ಕೆ ತನ್ನದೆಯಾದ ಮಹತ್ವವಿದ್ದು ಮನದ ಮೋಹ ಕಳೆದು ನಿಷ್ಕಲ್ಮಶ ಪ್ರೀತಿಯ ಹುಟ್ಟಲಿ ಎನ್ನುವುದು ಹೋಳಿ ಹಬ್ಬದ ವಿಶೇಷವಾಗಿದೆ. ಶಿವನು ತನ್ನ ಉರಿಗಣ್ಣಿನಿಂದ ಕಾಮನ ದಹನ ಮಾಡಿದ್ದು ಪುರಾಣಗಳಿಂದ ತಿಳಿದು ಬರುತ್ತದೆ. ಹೋಳಿ ಹಬ್ಬ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಆಚರಿಸಬೇಕು ಎಂದು ಹೇಳಿದರು.

ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿದರು. ಯುವಕರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವು ಆರಂಭಗೊಂಡಿತು.

ಪಟ್ಟಣದ ಹಾವಳಿ ಹನಮಪ್ಪನ ಓಣಿ ಹಾಗೂ ಸೊಪ್ಪಿನ ಕೇರಿ ಓಣಿಯಲ್ಲಿ ರೇನ್ ಡ್ಯಾನ್ಸ್‌ನಲ್ಲಿ ಯುವಕರು ಡಿಜೆ ಸೌಂಡಿಗೆ ಹುಚ್ಚೆದ್ದು ಕುಣಿಯುತ್ತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಕಂಡು ಬಂದಿತು. ವಿದ್ಯಾರಣ್ಯ ಸರ್ಕಲ್, ಸೋಮೇಶ್ವರ ತೇರಿನ ಮನೆ ಯುವಕರು, ಸಮಗಾರ ಓಣಿ, ಬಸ್ತಿಕೇರಿಯ ಯುವಕರು ಸೇರಿದಂತೆ ವಿವಿಧ ಓಣಿಗಳಲ್ಲಿ ರತಿ ಮತ್ತು ಮನ್ಮಥನ ಮೆರವಣಿಗೆಯಲ್ಲಿ ಯುವಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದು ಕಂಡು ಬಂದಿತು.

ಹಳ್ಳದ ಕೇರಿಯ ಓಣಿಯಲ್ಲಿ ರತಿ ಮನ್ಮಥನ ಮೂರ್ತಿಗಳನ್ನು ಹಂಸದ ಮೇಲೆ ಕುಳ್ಳರಿಸಿ ಪಟ್ಟಣದ ತುಂಬ ಮೆರವಣಿಗೆ ಮಾಡಿ ದಹನ ಮಾಡಿದ್ದು ಕಂಡು ಬಂದಿತು.

ಪಟ್ಟಣದ ಪುರಸಭೆಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಮುಖ್ಯಾಧಿಕಾರಿಗಳೊಂದಿಗೆ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಒಟ್ಟಾರೆ ಪಟ್ಟಣದಲ್ಲಿ ಶಾಂತಿಯುತ ಹೋಳಿ ಹಬ್ಬ ಆಚರಿಸಿದ್ದು ಕಂಡು ಬಂದಿತು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ