ಓಲಾ ಕ್ಯಾಬ್‌ ಚಾಲಕನಿಂದ ಕಿರುಕುಳ :ಆರು ವರ್ಷಗಳ ಹಿಂದೆ ದಾಖಲಿಸಿದ್ದ ದೂರು - ಸರ್ಕಾರದ ವಿರುದ್ಧ ಹೈಕೋರ್ಟ್ ತರಾಟೆ

KannadaprabhaNewsNetwork |  
Published : Aug 22, 2024, 12:55 AM ISTUpdated : Aug 22, 2024, 08:57 AM IST
ಹೈಕೋರ್ಟ್ | Kannada Prabha

ಸಾರಾಂಶ

ಓಲಾ ಕ್ಯಾಬ್‌ ಚಾಲಕ ನೀಡಿದ್ದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿ ಆರು ವರ್ಷಗಳ ಹಿಂದೆ ದಾಖಲಿಸಿದ್ದ ದೂರು ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಮತ್ತು ಪ್ರಕರಣ ಕುರಿತು ಸಮಗ್ರ ಮಾಹಿತಿ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 ಬೆಂಗಳೂರು : ಓಲಾ ಕ್ಯಾಬ್‌ ಚಾಲಕ ನೀಡಿದ್ದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಆರು ವರ್ಷಗಳ ಹಿಂದೆ ದಾಖಲಿಸಿದ್ದ ದೂರು ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಮತ್ತು ಪ್ರಕರಣ ಕುರಿತು ಸಮಗ್ರ ಮಾಹಿತಿ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣ ಸಂಬಂಧ ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆ-2013’ ಅಡಿಯಲ್ಲಿ ಓಲಾ ಕ್ಯಾಬ್‌ ಮಾತೃಸಂಸ್ಥೆಯಾದ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ ಆಂತರಿಕ ದೂರು ಸಮಿತಿಗೆ 2018ರಲ್ಲಿ ನೀಡಿದ್ದ ದೂರು ಕುರಿತು ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಕರಣ ಆರಂಭವಾದಾಗಿನಿಂದ ಇಲ್ಲಿಯವರೆಗೆ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸಾರಿಗೆ ಇಲಾಖೆಗೆ ನ್ಯಾಯಾಲಯವು ಕಳೆದ ವಿಚಾರಣೆ ವೇಳೆ ಆದೇಶಿಸಿತ್ತು. ಸಾರಿಗೆ ಇಲಾಖೆ ಪರ ಸರ್ಕಾರಿ ವಕೀಲರು ಪ್ರಮಾಣ ಪತ್ರ ಸಲ್ಲಿಸಿದ್ದರೂ ಪ್ರಕರಣ ಕೇಂದ್ರಿತವಾಗಿ ಯಾವುದೇ ಮಾಹಿತಿ ಇರಲಿಲ್ಲ.

ಇದರಿಂದ ಕೆಂಡಾಮಂಡಲವಾದ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವುದು ಯಾವ ಪ್ರಮಾಣ ಪತ್ರ? ಯುವತಿಯ ಮೇಲೆ ಓಲಾ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯನ್ನು ನಿಯಮದ ಪ್ರಕಾರ ಓಲಾ ಸಂಸ್ಥೆಯು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಸರ್ಕಾರ ಹೇಳಿ ಸುಮ್ಮನೆ ಕುಳಿತಿದೆ. ಸರ್ಕಾರ ಏನು ಮಾಡುತ್ತಿದೆ ಎನ್ನುವ ಬಗ್ಗೆ ಹೇಳಿಲ್ಲ. ಈ ಪ್ರಮಾಣ ಪತ್ರ ಕಣ್ಣೊರೆಸುವ ತಂತ್ರದ ಭಾಗವಾಗಿದೆ ಎಂದು ಚಾಟಿ ಬೀಸಿತು.

ಪ್ರಕರಣ ಕುರಿತು ಅರ್ಜಿದಾರರು ಓಲಾ ಕಂಪನಿಯ ಆಂತರಿಕ ದೂರು ಸಮಿತಿಗೆ ನೀಡಿರುವ ದೂರು ಏನಾಗಿದೆ? ಕಂಪನಿ ಏನು ಕ್ರಮ ಕೈಗೊಂಡಿದೆ. ಪ್ರಕರಣ ಕುರಿತು ಓಲಾಕ್ಕೆ ನೋಟಿಸ್‌ ಜಾರಿ ಮಾಡುವ ಮುನ್ನಾ ಏನಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಅಗ್ರಿಗೇಟರ್‌ ನಿಯಮಗಳ ಅನುಪಾಲನೆ ಜವಾಬ್ದಾರಿ ಹೊತ್ತಿರುವ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು, ಪ್ರಕರಣ ಕುರಿತು ಸಮರ್ಪಕ ಕ್ರಮ ಜರುಗಿಸದ ಓಲಾ ಕಂಪನಿಯ ಮೇಲೆ ಏನು ಕ್ರಮ ಜರುಗಿಸಿದ್ದಾರೆ? ಆಂತರಿಕವಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ? ಎಂಬುದು ತಿಳಿಯುವುದು ನ್ಯಾಯಾಲಯದ ಉದ್ದೇಶವಾಗಿದೆ. ಆದರೆ, ಸರ್ಕಾರ ಮಾತ್ರ ತನ್ನ ಪ್ರಮಾಣ ಪತ್ರದಲ್ಲಿ ಏನು ಮಾಹಿತಿ ನೀಡಿಲ್ಲ. ಇದರಿಂದ ಅಧಿಕಾರಿಗಳು ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳುವ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ತೀಕ್ಷ್ಣವಾಗಿ ನುಡಿಯಿತು.

ಅಂತಿಮವಾಗಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ನ್ಯಾಯಪೀಠ, ಮುಂದಿನ ಪರಿಣಾಮ ಎದುರಿಸಲು ಸಿದ್ಧವಾಗಿರುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ