5,8,9,11ನೇ ಕ್ಲಾಸ್‌ಗೆ ಬೋರ್ಡ್‌ ಪರೀಕ್ಷೆ: ಒಂದೇ ದಿನದಲ್ಲಿ ಹೈಕೋರ್ಟ್‌ ಅನುಮತಿ

KannadaprabhaNewsNetwork |  
Published : Mar 08, 2024, 01:53 AM ISTUpdated : Mar 08, 2024, 08:00 AM IST
ಕರ್ನಾಟಕ ಉಚ್ಛ ನ್ಯಾಯಾಲಯ | Kannada Prabha

ಸಾರಾಂಶ

5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ರದ್ದುಪಡಿಸಿ ಬುಧವಾರ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪಿಗೆ ವಿಭಾಗೀಯ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ (11ನೇ ತರಗತಿ) ರಾಜ್ಯಮಟ್ಟದ ಬೋರ್ಡ್ (ಪಬ್ಲಿಕ್‌) ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ರದ್ದುಪಡಿಸಿ ಬುಧವಾರ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪಿಗೆ ವಿಭಾಗೀಯ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.

ಈ ಆದೇಶದಿಂದ ಸರ್ಕಾರ ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೋಮವಾರದಿಂದ (ಮಾ.11) ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಯವುದು ನಿಶ್ಚಿತವಾಗಿದೆ.

ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ 2023ರ ಅ.6 ಮತ್ತು 9ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ‘ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ’ (ರುಪ್ಸಾ) ಹಾಗೂ ‘ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ’ (ಅವರ್‌ ಸ್ಕೂಲ್ಸ್‌) ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ಏಕಸದಸ್ಯ ಪೀಠ, ಸರ್ಕಾರದ ಸುತ್ತೋಲೆಗಳನ್ನು ರದ್ದುಪಡಿಸಿ ಬುಧವಾರ ಆದೇಶಿಸಿತ್ತು. 

ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಗುರುವಾರ ಸರ್ಕಾರ ಹಾಗೂ ಮೂಲ ಅರ್ಜಿದಾರರಾದ ರುಪ್ಸಾ ಮತ್ತು ಅವರ್‌ ಸ್ಕೂಲ್ಸ್‌ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿತು. ಆ ಮೂಲಕ ಬೋರ್ಡ್‌ ಪರೀಕ್ಷೆಗೆ ಹಸಿರು ನಿಶಾನೆ ತೋರಿತು.

ಅನಿಶ್ಚಿತ ಸನ್ನಿವೇಶ: ಉಭಯ ಕಡೆಯ ವಾದ ಆಲಿಸಿದ ನಂತರ ವಿಭಾಗೀಯ ಪೀಠ, ಪೂರ್ವ ನಿಗದಿಯಂತೆ 5, 8, 9ನೇ ತರಗತಿಗಳಿಗೆ ಮಾ.11ರಿಂದ ಪರೀಕ್ಷೆಗಳು ಆರಂಭವಾಗಲಿದೆ. 

ವೇಳಾಪಟ್ಟಿಯನ್ನು 2023ರ ಡಿ.12ರಂದು ಪ್ರಕಟಿಸಿದ್ದು, ಪರೀಕ್ಷೆ ನಡೆಸಲು ಸರ್ಕಾರ ಮತ್ತು ಅದರ ಪ್ರಾಧಿಕಾರಗಳು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಸಿವೆ. 

ತಕರಾರು ಅರ್ಜಿಗಳ ವಿಚಾರಣೆ ಹಂತದಲ್ಲಿ ಏಕ ಸದಸ್ಯ ನ್ಯಾಯಪೀಠ ಯಾವುದೇ ಮಧ್ಯಂತರ ಆದೇಶ ಮಾಡದೇ ಬುಧವಾರ ಆದೇಶ ಪ್ರಕಟಿಸಿದೆ.

ಇಂತಹ ಸಂದರ್ಭದಲ್ಲಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡದಿದ್ದರೆ ಅನಿಶ್ಚಿತ ಸನ್ನಿವೇಶ ಮುಂದುವರಿಯುತ್ತದೆ. ಪರೀಕ್ಷೆ ಮುನ್ನ ಇಂತಹ ಸನ್ನಿವೇಶ ಸೃಷ್ಟಿಯಾಗುವುದರಿಂದ ವಿದ್ಯಾರ್ಥಿ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸರ್ಕಾರದ ವಾದ ಸೂಕ್ತವಾಗಿದೆ. 

ಹಾಗಾಗಿ, ಮೇಲ್ಮನವಿಗೆ ಸಂಬಂಧಿಸಿದ ಮೆರಿಟ್‌ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಏಕ ಸದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಲಾಗುತ್ತಿದೆ. 

ಈ ತಡೆಯಾಜ್ಞೆ ಮೇಲ್ಮನವಿ ಕುರಿತ ಮುಂದಿನ ಆದೇಶ/ವಿಲೇವಾರಿವರೆಗೆ ಜಾರಿಯಲ್ಲಿರುತ್ತದೆ ಎಂದು ವಿಭಾಗೀಯ ಪೀಠ ಆದೇಶಿಸಿದೆ.ಬೋರ್ಡ್‌ ಪರೀಕ್ಷೆ ನಡೆಸಲು 2023ರ ನ.16ರಂದು ಹೊರಡಿಸಿರುವ ಆದೇಶವನ್ನು ಪ್ರತಿವಾದಿಗಳಾದ ರುಪ್ಸಾ ಹಾಗೂ ಅವರ್ಸ್‌ ಸ್ಕೂಲ್‌ ಪ್ರಶ್ನಿಸಿಲ್ಲ. 

ಸರ್ಕಾರದ ಹೊರಡಿಸಿದ ಅಧಿಸೂಚನೆಗಳ ಹೊರತಾಗಿ ಏಕ ಸದಸ್ಯ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್‌ 22 ಹಾಗೂ 15 ಅನ್ನು ಚರ್ಚಿಸುವ ಬದಲು ಸೆಕ್ಷನ್‌ 7 ಹಾಗೂ 145(4) ಮೇಲೆ ಚರ್ಚಿಸಿ ತೀರ್ಪು ನೀಡಿದೆ. 

ಇದಲ್ಲದೇ ಸರ್ಕಾರದ ನಿರ್ಧಾರವು 10 ಲಕ್ಷ ರು. ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂತಹದ್ದಾಗಿದೆ. ಈ ವಿಚಾರವನ್ನು ಏಕ ಸದಸ್ಯ ನ್ಯಾಯಪೀಠ ಅತ್ಯಂತ ಗಂಭೀರವಾಗಿ ಪರಗಿಣಿಸಬೇಕಿತ್ತು ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ, ಸೋಮವಾರ ಮಧ್ಯಾಹ್ನ 2.30ಕ್ಕೆ 5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ಆರಂಭವಾಗಲಿವೆ. 42,255 ಸರ್ಕಾರಿ ಶಾಲೆಗಳು, 2,656 ಅನುದಾನಿತ ಶಾಲೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 53,680 ಶಾಲೆಗಳಿವೆ. 

ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಬೋರ್ಡ್‌ ಪರೀಕ್ಷೆ ನಡೆಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಹೀಗೆ ಮಾಡಲಾಗುತ್ತಿದೆ. 

ಸರ್ಕಾರ ಪರೀಕ್ಷೆ ಪರಿಚಯಿಸುವಂತಿಲ್ಲ ಎಂದು ಪ್ರತಿವಾದಿಯಾಗಿರುವ ರುಪ್ಸಾ (ಮೂಲ ಅರ್ಜಿದಾರರಲ್ಲಿ ಒಬ್ಬರು) ಹೇಳಲಾಗದು ಎಂದು ವಾದಿಸಿದರು.

ರಾಜ್ಯದಲ್ಲಿ 5-8ನೇ ತರಗತಿಯ 46 ಸಾವಿರ ಶಾಲೆಗಳಿದ್ದು, ಪ್ರತಿ ಬ್ಯಾಚಿಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಟ್ಟಾರೆ 5, 8 ಮತ್ತು 9ನೇ ತರಗತಿಯ 25 ಲಕ್ಷ ವಿದ್ಯಾರ್ಥಿಗಳಿದ್ದಾರೆ. 

ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತದೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ. ಉಳಿದ 5, 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 

11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಬೇಕಿದೆ. ಈ ಪೈಕಿ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರೂ ಹೈಕೋರ್ಟ್‌ ಮೆಟ್ಟಿಲೇರಿಲ್ಲ. 

ತನ್ನ ಹಿತಾಸಕ್ತಿಯಿಂದ ರುಪ್ಸಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಏಕ ಸದಸ್ಯ ಪೀಠದ ಆದೇಶದಿಂದ ಮಕ್ಕಳಿಗೆ ಪರೀಕ್ಷೆ ವಿಚಾರದಲ್ಲಿ ಅನಿಶ್ಚಿತತೆ ಎದುರಾಗಿದೆ ಎಂದು ವಿವರಿಸಿದರು.

ಯಾರನ್ನೂ ಫೇಲ್‌ ಮಾಡಲ್ಲ: ಬೋರ್ಡ್‌ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣ ಮಾಡುವುದಿಲ್ಲ. ಕಲಿಕೆ ಗುಣಮಟ್ಟವನ್ನು ವೃದ್ಧಿಸುವ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಪರೀಕ್ಷೆ ನಡೆಸಲಾಗುತ್ತಿದೆ. 

ಫಲಿತಾಂಶವನ್ನು ಬಹಿರಂಗಪಡಿಸುವುದಿಲ್ಲ. ಆಯಾ ವಿದ್ಯಾರ್ಥಿ ಹಾಗೂ ಪೋಷಕರಿಗೆ ಖುದ್ದಾಗಿ ತಲುಪಿಸಲಾಗುತ್ತಿದೆ. ಅಂತಿಮವಾಗಿ ವಿಭಾಗೀಯ ಪೀಠವು ಶಿಕ್ಷಣ ಕಾಯ್ದೆ ಸೆಕ್ಷನ್ 145 ಹೇಳುವಂತೆ ಬೋರ್ಡ್‌ ಪರೀಕ್ಷೆ ಪರಿಚಯಿಸಲು ನಿಯಮ ರೂಪಿಸಬೇಕು ಎಂದು ಹೇಳಿದರೆ, ಅದಕ್ಕೆ ಸರ್ಕಾರ ಬದ್ಧವಾಗಿರುತ್ತದೆ. 

ಅದನ್ನು ಮುಂದಿನ ವರ್ಷದಿಂದ ಪಾಲಿಸುತ್ತೇವೆ. ಸದ್ಯ ಸೋಮವಾರದಿಂದ ಪರೀಕ್ಷೆ ನಡೆಯಬೇಕಿರುವ ಕಾರಣ ಏಕ ಸದಸ್ಯ ಪೀಠಕ್ಕೆ ತಡೆ ನೀಡಬೇಕು ಎಂದು ಕೋರಿದರು.

ರುಪ್ಸಾ ಪರ ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ. ಧನಂಜಯ ಅವರು, ಕಳೆದ ವರ್ಷ ಸರ್ಕಾರ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಸೆಕ್ಷನ್ 12ರ ಅಡಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರಲಿದೆ ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. 

ಆದರೆ, ಮರು ದಿನವೇ ಪರೀಕ್ಷೆ ನಿಗದಿಯಾಗಿತ್ತು. ಅಂದೂ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ, ತಡೆ ಕೋರಿತ್ತು. ಆದರೆ, ವಿಭಾಗೀಯ ಪೀಠ ತಡೆ ನೀಡಿರಲಿಲ್ಲ. 

ಹೀಗಾಗಿ, ಪರೀಕ್ಷೆ ಮುಂದೂಡಲಾಗಿತ್ತು. ಅದರಂತೆ ಹೈಕೋರ್ಟ್‌ನಲ್ಲಿ ಸರ್ಕಾರ ಹಲವು ಬಾರಿ ವಿಚಾರಣೆ ಮುಂದೂಡಿಕೆ ಕೋರಿ, ಕೊನೆಗೆ ಮೇಲ್ಮನವಿ ಹಿಂಪಡೆದಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಹಾಗೆಯೇ, ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಅಡಿ ಸರ್ಕಾರ ನಡೆದುಕೊಂಡಿದ್ದರೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ದೊರಕುತ್ತಿತ್ತು. ಏಕಸದಸ್ಯ ಪೀಠ ಸರ್ಕಾರ ಬೋರ್ಡ್‌ ಪರೀಕ್ಷೆ ನಡೆಸಲಾಗದು ಎಂದು ಈಗಾಗಲೇ ಸ್ಪಷ್ಟಪಡಿಸಿದೆ. 

ಮೂರು ದಿನ ಬಾಕಿಯಿರುವಾಗ ಬೋರ್ಡ್‌ ಪರೀಕ್ಷೆ ರದ್ದು ಮಾಡುವ ವೇಳೆ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಿಗೂ ಕಳಕಳಿ ಇರುತ್ತದೆ. ಸೋಮವಾರ ಪರೀಕ್ಷೆ ನಡೆಯದಿದ್ದರೆ ಆಕಾಶ ಕಳಚಿ ಬೀಳುವುದಿಲ್ಲ. 

ಮಕ್ಕಳ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರದ ಮನವಿ ಪುರಸ್ಕರಿಸಬಾರದು. ವಿಭಾಗೀಯ ಪೀಠ ವಿಸ್ತೃತವಾಗಿ ವಾದ ಆಲಿಸಿ, ಆದೇಶ ಮಾಡಿದ ಬಳಿಕ ಸರ್ಕಾರ ಪರೀಕ್ಷೆ ನಡೆಸಲಿ. 

ಈಗ ವಿಭಾಗೀಯ ಪೀಠದಿಂದ ಸರ್ಕಾರ ಮಧ್ಯಂತರ ತಡೆಯಾಜ್ಞೆ ಪಡೆದು ಪರೀಕ್ಷೆ ನಡೆಸುವುದು ಬೇಡ ಎಂದು ಕೋರಿದರು.

ರಾತ್ರಿ 7ಕ್ಕೆ ಬಂದ ತೀರ್ಪು: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ಬೆಳಗ್ಗೆ ಹಾಜರಾದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು, ಸೋಮವಾರವೇ ಪರೀಕ್ಷೆಗಳು ಆರಂಭವಾಗಲಿರುವ ಕಾರಣ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು. 

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ತಾವು ಇಂದು ಹೆಚ್ಚು ಕಾಲ ಲಭ್ಯವಿರುವುದಿಲ್ಲ. ಮತ್ತೊಂದು ಪೀಠದ ಮುಂದೆ ಮೇಲ್ಮನವಿಯ ವಿಚಾರಣೆಯನ್ನು ನಿಗದಿಪಡಿಸಲು ಸೂಚಿಸಲಾಗುವುದು ಎಂದು ತಿಳಿಸಿದರು. 

ಅದರಂತೆ ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ವಿಚಾರಣೆಗೆ ನಿಗದಿಯಾಯಿತು. ಈ ಪೀಠ ವಿಚಾರಣೆ ನಡೆಸಿ ರಾತ್ರಿ ಸುಮಾರಿಗೆ 7 ಗಂಟೆಗೆ ತೀರ್ಪು ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!