ಬಹುಕೋಟಿ ವಂಚಕನ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

KannadaprabhaNewsNetwork |  
Published : Jul 29, 2025, 01:48 AM IST
32 | Kannada Prabha

ಸಾರಾಂಶ

ಬಿಹಾರದ ಉದ್ಯಮಿಗೆ ಹತ್ತು ಕೋಟಿ ರು. ವಂಚನೆ ಮತ್ತು ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ರು. ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಮಂಗಳೂರಿನ ರೋಶನ್ ಸಲ್ದಾನನ ವಿರುದ್ಧ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಸುಮಾರು 200 ಕೋಟಿ ರು.ಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿ ರಿಲೀಫ್ ನೀಡಿದೆ.

ಬಿಹಾರದ ಉದ್ಯಮಿಗೆ ಹತ್ತು ಕೋಟಿ ರು. ವಂಚನೆ ಮತ್ತು ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ರು. ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇತ್ತೀಚೆಗೆ ಸಾಲ ನೀಡುವ ನೆಪದಲ್ಲಿ ಭಾರೀ ವಂಚನೆ ನಡೆಸಿದ ಜಾಲದಲ್ಲಿ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರೋಶನ್ ಸಲ್ದಾನ ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಆತನ ಬಂಧನ ವಿಚಾರ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಹಲವಾರು ಉದ್ಯಮಿಗಳು ತಮಗೆ ವಂಚನೆ ನಡೆಸಿರುವ ಬಗ್ಗೆ ದೂರು ನೀಡಲು ಮುಂದೆ ಬಂದಿದ್ದರು. ಬಿಹಾರ ಮೂಲದ ಉದ್ಯಮಿ ತನ್ನಿಂದ ಹತ್ತು ಕೋಟಿ ರು. ವಂಚನೆ ಎಸಗಿದ್ದಾನೆಂದು ದೂರು ನೀಡಿದ್ದರು. ಅಸ್ಸಾಂ ಮತ್ತು ಮಹಾರಾಷ್ಟ್ರ ಮೂಲದ ವ್ಯಕ್ತಿಗಳೂ 5 ಕೋಟಿ ರು.ನಂತೆ ವಂಚನೆ ಎಸಗಿದ್ದಾಗಿ ದೂರು ನೀಡಿದ್ದರು. ಅದಕ್ಕೂ ಮೊದಲೇ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಒಂದೂವರೆ ಕೋಟಿ ರು. ವಂಚಿಸಿದ್ದ ಬಗ್ಗೆ ದೂರು ನೀಡಿದ್ದರು.ಮಂಗಳೂರಿನಲ್ಲಿ ದಾಖಲಾದ ಎರಡು ದೂರನ್ನು ಆಧರಿಸಿ ಪೊಲೀಸರು ಆರೋಪಿ ರೋಶನ್ ಸಲ್ದಾನ ವಿರುದ್ಧ ಕಾರ್ಯಾಚರಣೆ ನಡೆಸಿ ಆತನ ಮನೆಯಲ್ಲೇ ಬಂಧಿಸಿದ್ದರು. ಬಂಧನ ಸಂದರ್ಭದಲ್ಲಿ ತನ್ನ ಮನೆಯನ್ನು ಐಷಾರಾಮಿಯಾಗಿ ತೋರಿಸುತ್ತಿದ್ದುದು, ಮನೆಯ ಒಳಗಡೆಯೇ ವಿದೇಶಿ ಮದ್ಯವನ್ನೊಳಗೊಂಡ ಬಾರ್ ಅಂಡ್ ರೆಸ್ಟೋರೆಂಟ್ ರೀತಿ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ ಮಲೇಶ್ಯನ್ ಯುವತಿಯನ್ನೂ ಜೊತೆಗೆ ಇಟ್ಟುಕೊಂಡಿರುವುದು ಕಂಡುಬಂದಿತ್ತು. ನಂತರ ಮಂಗಳೂರಿನ ಸಿಜೆಎಂ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದರೂ, ಬೆನ್ನು ಬೆನ್ನಿಗೆ ದೂರು ದಾಖಲಾಗಿದ್ದರಿಂದ ಜಾಮೀನು ಸಿಕ್ಕಿರಲಿಲ್ಲ. ಈ ನಡುವೆ ಹೈಕೋರ್ಟ್ ಮೂಲಕ ಎರಡು ಪ್ರಕರಣಗಳಿಗೆ ತಡೆಯಾಜ್ಞೆ ತರಲಾಗಿದೆ. ಮಂಗಳೂರಿನಲ್ಲಿ ರೋಶನ್ ಸಲ್ದಾನ ಪರವಾಗಿ ಹಿರಿಯ ಕ್ರಿಮಿನಲ್ ವಕೀಲ ಅರುಣ್ ಬಂಗೇರ ವಕಾಲತ್ತು ನಡೆಸುತ್ತಿದ್ದಾರೆ.

ಸದ್ಯಕ್ಕೆ ಆರೋಪಿ ರೋಶನ್ ಸಲ್ದಾನ ಪೊಲೀಸರ ಕಸ್ಟಡಿಯಲ್ಲಿದ್ದು, ಎರಡು ಪ್ರಕರಣದಲ್ಲಿ ತಡೆಯಾಗಿದ್ದರಿಂದ ಸೋಮವಾರ ಕೋರ್ಟಿಗೆ ಹಾಜರು ಪಡಿಸುವ ಸಂದರ್ಭದಲ್ಲಿ ಬಂಧನಕ್ಕೆ ತಡೆ ನೀಡಿ ಜಾಮೀನು ನೀಡುವಂತೆ ವಕೀಲರು ಕೇಳಿಕೊಳ್ಳುವ ಸಾಧ್ಯತೆಯಿದೆ. ಎರಡು ಪ್ರಕರಣದಲ್ಲಿ ತಡೆ ಆಗಿದ್ದರೂ ಉಳಿದ ಪ್ರಕರಣಗಳಲ್ಲಿ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಶನ್ ವಿರುದ್ಧ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದ ಉದ್ಯಮಿಗಳೂ ಪ್ರಕರಣ ದಾಖಲಿಸಿರುವುದರಿಂದ ಹೆಚ್ಚುವರಿ ಕೇಸನ್ನು ದಾಖಲಿಸುವುದಕ್ಕೂ ಅವಕಾಶ ಇದೆ. ಪೊಲೀಸರು ಆರೋಪಿಗೆ ಜಾಮೀನು ಸಿಗದಂತೆ ಮಾಡಲು ತಯಾರಿ ನಡೆಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ