ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗ

KannadaprabhaNewsNetwork |  
Published : May 30, 2025, 12:49 AM ISTUpdated : May 30, 2025, 09:53 AM IST
Jagadish shettar

ಸಾರಾಂಶ

ಹಳೆ ಹುಬ್ಬಳ್ಳಿ ಗಲಭೆ ಸೇರಿದಂತೆ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

 ಬೆಳಗಾವಿ : ಹಳೆ ಹುಬ್ಬಳ್ಳಿ ಗಲಭೆ ಸೇರಿದಂತೆ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಹಳೇ ಹುಬ್ಬಳ್ಳಿ ಘಟನೆ ಸೇರಿ ರಾಜ್ಯ ಸರ್ಕಾರ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿತ್ತು. ಹಳೇ ಹುಬ್ಬಳ್ಳಿ ಕೇಸ್‌ನಲ್ಲಿ ನೂರಾರು ಯುವಕರು ಪೊಲೀಸ್ ‌ಸ್ಟೇಷನ್ ಮೇಲೆ ದಾಳಿ ಮಾಡಿದ್ದರು. 

ಕೆಲವೇ ಹೊತ್ತಿನಲ್ಲಿ ಹತ್ತಾರು ಸಾವಿರ ಜನ ಸೇರಿ, ಪೊಲೀಸರ‌ ಮೇಲೆ ಹಲ್ಲೆಗೆ ಯತ್ನಿಸಿದರು. ಅಂದು ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸಿತ್ತು. ಹಳೇ ಹುಬ್ಬಳ್ಳಿ ಗಲಭೆಕೋರರು ವರ್ಷಗಟ್ಟಲೇ ಜೈಲಿನಲ್ಲಿದ್ದರು. ನಮ್ಮ ಸರ್ಕಾರದ ಮೇಲೂ ಗಲಭೆಕೋರರ ಬಿಡುಗಡೆ ಸಂಬಂಧ ಒತ್ತಡ ಇತ್ತು. ಆದರೆ ನಮ್ಮ ಸರ್ಕಾರ ಆಗ ಪೂರಕ ಸ್ಪಂದನೆ ಕೊಟ್ಟಿರಲಿಲ್ಲ. ಕಾನೂನು ನಿಯಮ ಮೀರಿ ಸಿದ್ದರಾಮಯ್ಯನವರು ಕೇಸ್ ವಾಪಸ್ ಪಡೆದರು ಎಂದು ದೂರಿದರು.

ಕೇಸ್ ವಾಪಸ್ ಪಡೆದಾಗಲೇ ನಾನು ಇದು ಕಾನೂನು ಬಾಹಿರ ಕೃತ್ಯ ಎಂದಿದ್ದೆ. ಈ ರೀತಿಯ ಕ್ರಿಮಿನಲ್ ಕೇಸ್ ವಿಥ್ ಡ್ರಾ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಗೃಹ, ಕಾನೂನು ಇಲಾಖೆ ಸಲಹೆ ಪಡೆಯದೇ ಸಿದ್ದರಾಮಯ್ಯ ಕೇಸ್ ವಾಪಸ್ ಪಡೆದರು. ಕಾನೂನು ಮೀರಿ ನಿರ್ಧಾರ ಪ್ರಕಟಿಸಿದಕ್ಕೆ ಈಗ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಪ್ರಕರಣ ಸಂಪೂರ್ಣ ವಿಚಾರಣೆ ಬಳಿಕ ಕ್ಯಾಬಿನೆಟ್ ನಿರ್ಧಾರವನ್ನು ಹೈಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್ ಆದೇಶದಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ‌ದೊಡ್ಡ ಮುಖಭಂಗವಾಗಿದೆ ಎಂದರು.

ರಾಜ್ಯ ಸರ್ಕಾರಕ್ಕೆ, ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಚಾಟಿ ಏಟು ಕೊಟ್ಟಿದೆ. ಅಲ್ಪಸಂಖ್ಯಾತ ಮುಸ್ಲಿಮರನ್ನು ಓಲೈಸಲು ಸಿದ್ದರಾಮಯ್ಯ ‌ಕೇಸ್ ವಾಪಸ್ ಪಡೆದಿದ್ದರು. ಕಾನೂನು ಕ್ರಮದಿಂದ ಪಾರು ಮಾಡಿದರೆ ಕ್ರಿಮಿನಲ್‌ಗಳಿಗೆ ಯಾವಾಗ ಬುದ್ಧಿ ಬರುತ್ತದೆ? ಪಿಎಫ್ಐ ಸಂಘಟನೆಗಳ ಕಾರ್ಯಕರ್ತರ ಕೇಸ್‌ಗಳನ್ನು ಈ ಹಿಂದೆ ಸಿದ್ದರಾಮಯ್ಯ ಹಿಂದೆ ಪಡೆದಿದ್ದರು. ಹೀಗಾಗಿ ಕ್ರಿಮಿನಲ್ಸ್‌ಗಳಿಗೆ ರಾಜ್ಯ ಸರ್ಕಾರ, ಪೊಲೀಸರ ಬಗ್ಗೆ ಭಯ ಹೋಗಿದೆ. ಈ ಕಾರಣಕ್ಕೆ ಕರಾವಳಿ ಭಾಗದಲ್ಲಿ ನಿತ್ಯ ಕೊಲೆ, ಚೂರಿ ಇರಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರ ಪ್ರಕರಣಗಳು ಕಾಂಗ್ರೆಸ್ ‌ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿವೆ. ಕಾಂಗ್ರೆಸ್ ಸರ್ಕಾರದ ಅತಿಯಾದ ತೃಷ್ಟೀಕರಣ ನೀತಿಯನ್ನು ರಾಜ್ಯದ ಜನ ನೋಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಪರೇಷನ್ ಸಿಂದೂರ ಬಗ್ಗೆ ವಿಶೇಷ ಅಧಿವೇಶನ ಕರೆಯಲು ಪ್ರತಿಪಕ್ಷಗಳು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜುಲೈ ತಿಂಗಳಲ್ಲಿ ಅಧಿವೇಶನ ನಡೆದೇ ನಡೆಯುತ್ತದೆ. ಈಗ ಹೊರಗೆ ಆಪರೇಷನ್ ಸಿಂದೂರ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಪಾರ್ಲಿಮೆಂಟ್ ಟೀಕೆ ಮಾಡಲು ಅಧಿವೇಶನ ಕರೆಯಲು ಆಗ್ರಹಿಸುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಸಾಕ್ಷಿಗಳನ್ನು ನೀಡಿವೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಆಪರೇಷನ್ ಸಿಂದೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮರಿಪುಡಾರಿಗಳು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ‌ನಾಯಕರು ಅವರದೇ ಪಕ್ಷದ ಶಶಿ ತರೂರು ನೋಡಿ ಕಲಿಯಬೇಕು ಎಂದು ಸಲಹೆ ನೀಡಿದರು. 

ಪ್ರಿಯಾಂಕ್ ಖರ್ಗೆ ಕಾರಣಕ್ಕೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸೋಲಬೇಕಾಯಿತು. ಮೊದಲ ಸಲ ಶಾಸಕ ಆದಾಗಲೇ ಪ್ರಿಯಾಂಕ್ ಖರ್ಗೆರನ್ನು ಮಂತ್ರಿ ಮಾಡಲಾಯಿತು. ಮಲ್ಲಿಕಾರ್ಜುನ ಖರ್ಗೆಗೆ ಸೆಟ್ ಬ್ಯಾಕ್ ಆಗಿದ್ದು ಇಲ್ಲಿಂದಲೇ. ಪುತ್ರನಿಗೆ ಮಲ್ಲಿಕಾರ್ಜುನ ಖರ್ಗೆ ಹೆಚ್ಚಿನ ಆದ್ಯತೆ ನೀಡಲು ಹೊರಟರು. 

ಹೀಗಾಗಿ ಖರ್ಗೆ ಜೊತೆಗಿದ್ದ ಅನೇಕ ನಾಯಕರು ಆಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಪರಿಣಾಮ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಈಗಲಾದರೂ ಪ್ರಿಯಾಂಕ್ ಖರ್ಗೆ ಜಂಬ ಕೊಚ್ಚಿಕೊಳ್ಳುವುದನ್ನು‌ ನಿಲ್ಲಿಸಬೇಕು. ಸಣ್ಣ ವಯಸ್ಸಿನಲ್ಲಿ ಮಂತ್ರಿ ಮಾಡಿದನ್ನು ಪ್ರಿಯಾಂಕ್ ಸದುಪಯೋಗ ಪಡೆಯಬೇಕಿತ್ತು. ಅಹಂಕಾರ ಮುಂದುವರಿದರೆ ಕಲಬುರ್ಗಿ ಜನರೇ ಅವರ ಹಣೆಬರಹ ಬರೆಯುತ್ತಾರೆ ಎಂದು ಕಿಡಿ ಕಾರಿದರು.

PREV
Read more Articles on

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ