ಕೆಪಿಎಸ್ಸಿ ಕೇಸ್‌ ಸಿಬಿಐಗೆ ವಹಿಸಲು ಹೈಕೋರ್ಟ್‌ ಇಂಗಿತ

KannadaprabhaNewsNetwork |  
Published : Jul 30, 2026, 02:00 AM ISTUpdated : Jul 30, 2026, 11:51 AM IST
High Court

ಸಾರಾಂಶ

ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.

 ಬೆಂಗಳೂರು :  ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.

ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಈವರೆಗೆ ನಡೆಸಿರುವ ಮತ್ತು ಮುಂದೆ ನಡೆಸಲಿರುವ ತನಿಖೆಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಆ.7ರಂದು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ಇದೇ ವೇಳೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಅರ್ಜಿಯ ಮುಂದಿನ ವಿಚಾರಣೆವರೆಗೆ ಈ ಅರ್ಜಿದಾರ ಅಭ್ಯರ್ಥಿಗಳ ವಿರುದ್ಧದ ಬಲವಂತದ ಕ್ರಮ ಜರುಗಿಸಬಾರದು, ಬಂಧಿಸಬಾರದು ಎಂದು ಸಿಐಡಿ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಎ) ನೇಮಕಾತಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಅಕ್ರಮದ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಬಿಐ ತನಿಖೆಗೆ ವಹಿಸಲು ಅರ್ಜಿದಾರರು ಕೋರಿದ್ದಾರೆ. ಹಾಗಾಗಿ ಅರ್ಜಿಯಲ್ಲಿ ಸಿಬಿಐ ಅನ್ನು ಪ್ರತಿವಾದಿ ಮಾಡಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ಆಕ್ಷೇಪಣೆ ಅಥವಾ ವಾದಾಂಶಗಳನ್ನು ಮುಂದಿನ ಶುಕ್ರವಾರದಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕವಾಗಲು ಸುಳ್ಳು ಜಾತಿ ಹಾಗೂ ಆದಾಯ ಪತ್ರ ನೀಡಿದ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್.ಸಾಹುಕಾರ ವಿರುದ್ಧ ಮತ್ತು ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಭ್ಯರ್ಥಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು (ಎಫ್ಐಆರ್) ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಚನ್ನರಾಯಪಟ್ಟಣದ ಪಶುವೈದ್ಯ ಮಂಜುನಾಥ್ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಕೆಲ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಯತ್ನಾಳ ಪರ ವಕೀಲ ವೆಂಕಟೇಶ್ ದಳವಾಯಿ ಹಾಜರಾಗಿ, ಕೆಪಿಎಸ್‌ಸಿ ಅಧ್ಯಕ್ಷರ ಸಂಬಂಧಿಯೊಬ್ಬರಿಗೆ ಓಎಂಆರ್ ಶೀಟ್‌ಗಳನ್ನು ತಿರುಚಲು ಅವಕಾಶ ಕಲ್ಪಿಸಲಾಗಿತ್ತು. ಕೆಲ ಅಭ್ಯರ್ಥಿಗಳನ್ನು ಹೊರ ರಾಜ್ಯಕ್ಕೆ ಕರೆದೊಯ್ದು, ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿ ತರಬೇತಿ ನೀಡಿ ವಾಪಸ್ ಕರೆತಂದಿದ್ದಾರೆ. ಪಶುವೈದ್ಯಾಧಿಕಾರಿ ಹುದ್ದೆ ನೇಮಕಕ್ಕೆ ₹80 ಲಕ್ಷ ನೀಡಬೇಕು. ಅದರಲ್ಲಿ ₹40 ಲಕ್ಷವನ್ನು ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗುವಾಗ ಕೊಡಬೇಕು. ನಂತರ ಅಭ್ಯರ್ಥಿಯ ಮೂಲ ಅಂಕಪಟ್ಟಿ ಸಂಗ್ರಹಿಸುತ್ತಾರೆ ಎಂದು ಅಕ್ರಮ ನಡೆದಿರುವ ವಿಧಾನದ ಕುರಿತು ನ್ಯಾಯಪೀಠಕ್ಕೆ ವಿವರಿಸಿದರು.

ಅದಕ್ಕೆ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಓಎಂಆರ್ ಶೀಟ್ ತಿರುಚಲಾಗಿದೆಯೇ? ಅಭ್ಯರ್ಥಿಗಳನ್ನು ಹೊರ ಕರೆದುಕೊಂಡು ತರಬೇತಿ ನೀಡಲಾಗಿದೆಯೇ? ಹೀಗೆಲ್ಲಾ ಅಕ್ರಮ ನಡೆಸಲಾಗಿದೆಯೇ ಎಂದು ಕೇಳಿದರು.

ದಳವಾಯಿ ಉತ್ತರಿಸಿ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಸಮಗ್ರ ತನಿಖೆ ಮಾಡಲು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

ಸಿಐಡಿ ತನಿಖೆ ಮುಂದುವರಿಯಬಾರದು:

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅದು ಸಿಐಡಿಯಲ್ಲಿಯೇ ಮುಗಿದುಹೋಗುತ್ತದೆ. ಏನೂ ಆಗುವುದಿಲ್ಲ . ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕೇ ಅಥವಾ ಸಿಬಿಐ ತನಿಖೆ ನಡೆಸಬೇಕೇ ಎಂಬ ಬಗ್ಗೆ ನ್ಯಾಯಾಲಯ ನಿರ್ಧರಿಸುವವರೆಗೆ ಪ್ರಕರಣದ ಕುರಿತು ಸಿಐಡಿಯಲ್ಲಿ ತನಿಖೆ ಮುಂದುವರಿಯಬಾರದು. ಈ ಕುರಿತು ನಿರ್ದೇಶಿಸಲಾಗುವುದು ಎಂದು ನುಡಿದರು.

ಅದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಸಿಐಡಿ ತನಿಖೆಯನ್ನು ನ್ಯಾಯಾಲಯವು ತಡೆಹಿಡಿಯುವುದು ಸರಿಯಲ್ಲ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿಯಲಿ ಎಂದು ತಿಳಿಸಿದರು.

, ಮೇಲಿನ ಕೋರ್ಟ್‌ನಲ್ಲಿ ನನ್ನ ಆದೇಶವನ್ನು ಪರೀಕ್ಷೆಗೆ ಒಳಪಡಿಸಬಹುದು

ಅದಕ್ಕೆ ನ್ಯಾಯಪೀಠ, ನನ್ನ ಆದೇಶ ಸರಿ ಇಲ್ಲವಾದರೆ, ಮೇಲಿನ ಕೋರ್ಟ್‌ನಲ್ಲಿ ನನ್ನ ಆದೇಶವನ್ನು ಪರೀಕ್ಷೆಗೆ ಒಳಪಡಿಸಬಹುದು. ಒಂದು ವಾರ ಕಾಲಾವಕಾಶ ನೀಡಲಾಗುವುದು. ನೀವು ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸುತ್ತಿರೋ ಸಲ್ಲಿಸಿ. ನಿಮ್ಮ ವಾದ ಆಲಿಸಲಾಗುವುದು. ಆದರೆ, ಪ್ರಕರಣವನ್ನು ಹಾಗೆ ಸುಮ್ಮನೆ ಬಿಡಲಾಗದು ಎಂದು ನುಡಿದರು.

ಅದಕ್ಕೆ ಎಸ್ ಪಿಪಿ ಜಗದೀಶ್ ಅವರು, ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬದ್ಧ. ನ್ಯಾಯಾಲಯ ತನಿಖೆಯ ಯಾವುದೇ ದಾಖಲೆಗಳನ್ನು ಕೇಳಿದರೂ ಕೊಡಲು ಬದ್ಧರಾಗಿದ್ದೇವೆ. ನ್ಯಾಯಾಲಯವೇ ತನಿಖೆಯನ್ನು ಮೇಲ್ವಿಚಾರಣೆ ನಡೆಸಬಹುದು. ಹಿಂದೆ ಸಿಐಡಿಯು ಉನ್ನತ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸಿದ್ದು, ಯಶಸ್ವಿಯಾಗಿದ್ದಾರೆ. ಸಿಐಡಿ ತನಿಖೆಯ ಮೇಲೆ ಯಾವುದೇ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಬಾರದು ಎಂದು ಬಲವಾಗಿ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಉದ್ಘಾಟನೆಗೆ ಸಜ್ಜಾದ ಇಂದಿರಾ ಕ್ಯಾಂಟೀನ್‌
ಕೋಟಿ ಖರ್ಚಿನ ಸೂಪರ್‌ ಮಾರ್ಕೆಟ್‌ ಪಾಳು!