ಮುಖ್ಯಪೇದೆ ವಿರುದ್ಧ ಹೈ ಕೋರ್ಟ್‌ನಿಂದ ನೋಟಿಸ್‌ ರದ್ದು

KannadaprabhaNewsNetwork |  
Published : Nov 18, 2026, 03:45 AM IST
ಪೋಟೋ 5 : ಮೃತಪಟ್ಟ ಜಾನವಿ | Kannada Prabha

ಸಾರಾಂಶ

ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಖಾಸಗಿ ದೂರುಗಳ ವಿಚಾರಣೆ ವೇಳೆ ಜಾರಿಯಲ್ಲಿರುವ ಶಾಸನಬದ್ಧ ಕಡ್ಡಾಯ ರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಖಾಸಗಿ ದೂರುಗಳ ವಿಚಾರಣೆ ವೇಳೆ ಜಾರಿಯಲ್ಲಿರುವ ಶಾಸನಬದ್ಧ ಕಡ್ಡಾಯ ರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ಸೂಚಿಸಿದೆ.

ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿ 2025ರಲ್ಲಿ ನಡೆದಿದ್ದ ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಶಾಂತಿಭಂಗ ಉಂಟು ಮಾಡಿರುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಂಡೆಪಾಳ್ಯ ಮುಖ್ಯಪೇದೆ ಶಿವಶಂಕರ್‌ ವಿರುದ್ಧ ಕರಗ ಆಯೋಜಿಸಿದ್ದ ಅನಿಲ್‌ ಕುಮಾರ್‌ ಎಂಬುವರು ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದಿದ್ದರೂ ನಗರದ 9ನೇ ಎಸಿಜೆಎಂ ನ್ಯಾಯಾಲಯ (ಮ್ಯಾಜಿಸ್ಟ್ರೇಟ್‌ ಕೋರ್ಟ್‌) ದೂರುದಾರರ ಪ್ರಮಾಣಿಕೃತ ಹೇಳಿಕೆ ದಾಖಲಿಸಿಕೊಂಡು ಶಿವಶಂಕರ್‌ಗೆ (ಮೂರನೇ ಆರೋಪಿ) ನೋಟಿಸ್‌ ಜಾರಿಗೊಳಿಸಿ 2025ರ ಡಿ.12ರಂದು ಆದೇಶಿಸಿತ್ತು.

ಈ ನೋಟಿಸ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಶಿವಶಂಕರ್‌ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದಿದ್ದರೂ ದೂರುದಾರರ ಹೇಳಿಕೆ ದಾಖಲಿಸಿಕೊಂಡು ಅರ್ಜಿದಾರರಿಗೆ ನೋಟಿಸ್‌ ಜಾರಿ ಮಾಡಿರುವ ಕ್ರಮ ಭಾರತೀಯ ನಾಗರಿಕ ನ್ಯಾಯ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 218ರ ಉಲ್ಲಂಘನೆಯಾಗಿದೆ. ಹಾಗಾಗಿ, ಅರ್ಜಿದಾರರಿಗೆ ನೋಟಿಸ್‌ ಜಾರಿಗೊಳಿಸಿರುವ ಪ್ರಕ್ರಿಯೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಹೇಳಿದೆ.

ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 218 ಪಾಲನೆಯಾಗಿಲ್ಲವೆಂದು ಪ್ರಕರಣಕ್ಕೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಅಗತ್ಯವಿಲ್ಲ. ಬದಲಾಗಿ, ಕಾನೂನಿಗೆ ಅನುಗುಣವಾಗಿ ಸೂಕ್ತ ಹಂತದಿಂದ ಹೊಸದಾಗಿ ವಿಚಾರಣಾ ಪ್ರಕ್ರಿಯೆ ಮುಂದುವರಿಸಲು, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಅವರ ಬಳಿಗೆ ಮರಳಿಸುವುದು ಸೂಕ್ತವಾಗಿದೆ. ಅದರಂತೆ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ದೂರುದಾರರ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಿದ ನಂತರ, ಅಗತ್ಯ ಪ್ರಕ್ರಿಯೆಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪುನಃ ಕೈಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ದೂರುದಾರರ ಪ್ರಮಾಣಿಕೃತ ಹೇಳಿಕೆ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಕ್ರಮವನ್ನು ಹೈಕೋರ್ಟ್‌ ಆಕ್ಷೇಪಿಸಿದೆ.

ಸರ್ಕಾರಿ ನೌಕರರ ವಿರುದ್ಧ ಪ್ರಕರಣವನ್ನು ಪರಿಗಣನೆಗೆ (ಕಾಗ್ನಿಜೆನ್ಸ್‌) ತೆಗೆದುಕೊಳ್ಳುವ ಪ್ರಕ್ರಿಯೆಯೊಂದಿಗೆ ಮುಂದುವರಿಯುವ ಮೊದಲು, ವಿಶೇಷ ಶಾಸನಬದ್ಧ ನಿಬಂಧನೆಯ (ರಕ್ಷಣಾ ವ್ಯವಸ್ಥೆ) ಅಂದರೆ ಬಿಎನ್ಎಸ್‌ಎಸ್‌ ಸೆಕ್ಷನ್‌ 218ರ ಅನ್ವಯ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವ ಅಪೇಕ್ಷಿತ ಕ್ರಮವನ್ನು ಕೈಗೊಳ್ಳುವುದು ಮ್ಯಾಜಿಸ್ಟ್ರೇಟ್ ಕೋರ್ಟ್‌ ಕರ್ತವ್ಯವಾಗಿತ್ತು. ಸಕ್ಷಮಪ್ರಾಧಿಕಾರದ ಪೂರ್ವಾನುಮತಿ ಅನುಪಸ್ಥಿತಿಯಲ್ಲಿ ದೂರುದಾರರ ಪ್ರಮಾಣಿಕೃತ ಹೇಳಿಕೆ ದಾಖಲಿಸಿಕೊಳ್ಳುವಂತಿಲ್ಲ ಎಂದು ಪೀಠ ಹೆಳಿದೆ.

ಅಪರಾಧ ಪ್ರಕ್ರಿಯೆಯ ಪಾವಿತ್ರ್ಯವು ಕೇವಲ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿನಲ್ಲಿ ಮಾತ್ರವಲ್ಲದೆ, ಆ ತೀರ್ಪಿಗೆ ಕಾರಣವಾಗುವ ಪ್ರತಿಯೊಂದು ಹಂತದಲ್ಲೂ ಕಾನೂನನ್ನು ಎಷ್ಟು ನಿಷ್ಠೆಯಿಂದ ಪಾಲಿಸಲಾಗುತ್ತದೆ ಎಂಬುದರಲ್ಲೂ ಅಡಗಿರುತ್ತದೆ. ಅದರಂತೆ ಕಾನೂನುಬದ್ಧ ರಕ್ಷಣಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ನ್ಯಾಯಪೀಠ ಸಲಹೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆನೀರು ಕಾಲುವೆಗೆ ಸಿಎಂ ಶಂಕುಸ್ಥಾಪನೆ
ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ