ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆಯ ಪಾರ್ಕ್ ಜಾಗದಲ್ಲಿ ಕಟ್ಟಡ ನಿಮಾಣದ ಹೆಸರಿನಲ್ಲಿ ನಿವೇಶನ ಪಡೆದು ಕಚೇರಿ ನಿರ್ಮಿಸದೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದ ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.ಪಟ್ಟಣದ ಕಾರು ಚಾಲಕರ ಸಂಘದಿಂದ ಚಾಲಕ ಸಿ.ಶ್ರೀನಿವಾಸ್, ಅರುಣಕುಮಾರ್, ಟಿ.ಎನ್.ಈರೇಗೌಡ, ಬಿ.ಎನ್.ಕಿಶೋರ್, ಎನ್.ಸಿ.ಅರುಣಕುಮಾರ್ ಮತ್ತು ಸೈಯದ್ ಫೀಕ್ ಎನ್ನುವವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ಮಿಸುತ್ತಿರುವ ಮಳಿಗೆಗಳ ಕಾಮಗಾರಿಗೆ ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನಟರಾಜು ಮತ್ತು ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕಿ ಸುಮಾರಾಣಿ ಅವರನ್ನು ಭೇಟಿ ಮಾಡಿ ನ್ಯಾಯಾಲಯದ ತಡೆಯಾಜ್ಞೆ ಪ್ರತಿನೀಡಿ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಿದರು.ಪಟ್ಟಣದ ಚನ್ನಪ್ಪನ ಕಟ್ಟೆ, ಕೆರೆಯನ್ನು 70ರ ದಶಕದಲ್ಲಿ ಪುರಸಭೆ ಮುಚ್ಚಿ ಸಾರ್ವಜನಿಕ ಉದ್ಯಾವನ ನಿರ್ಮಿಸಿತ್ತು. ಉದ್ಯಾವನದ ಹೆಸರಿನಲ್ಲಿಯೇ ಆರ್.ಟಿ.ಸಿ ಇದ್ದರೂ ಸದರಿ ಜಾಗದಲ್ಲಿ ಈಗಾಗಲೇ ಪುರಸಭೆ ವಾಣಿಜ್ಯ ಕಟ್ಟಡಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಎಂಡಿಸಿಸಿ ಬ್ಯಾಂಕ್ ಕಟ್ಟಡಗಳು ತಲೆಯೆತ್ತಿವೆ.
ಉಳಿದ ಜಾಗದಲ್ಲಿ ಪಟ್ಟಣದ ಕಾರು ಚಾಲಕರು ಕಾರು ನಿಲ್ದಾಣವಾಗಿ ಬಳಕೆ ಮಾಡುತ್ತಿದ್ದರು. ಕಾರು ನಿಲ್ದಾಣದ ಜಾಗವನ್ನು ಪಿಎಲ್‌ಡಿ ಬ್ಯಾಂಕ್ ತನ್ನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಪಡೆದು ಬ್ಯಾಂಕ್‌ನ ಕಟ್ಟಡ ನಿರ್ಮಾಣ ಮಾಡದೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವುದು ಪಟ್ಟಣದ ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.ಈ ಹಿಂದೆ ಪಟ್ಟಣದ ಕಾರು ಚಾಲಕರು ಈ ಸ್ಥಳವನ್ನು ಕಾರು ನಿಲ್ದಾಣವನ್ನಾಗಿ ಮಾಡಿಕೊಂಡಿದ್ದರು. ಪುರಸಭೆ ಈ ಜಾಗವನ್ನು ತನ್ನ ವಶಕ್ಕೆ ಪಡೆದುಕೊಂಡು ಖಾಲಿ ಜಾಗವನ್ನು ಪಿಎಲ್‌ಡಿ ಬ್ಯಾಂಕ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದು ಕಾರು ಚಾಲಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಈ ಬಗ್ಗೆ ಕಾರು ಚಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿದ ಕಾರು ಚಾಲಕರು ಪಿ.ಎಲ್.ಡಿ ಬ್ಯಾಂಕ್ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ಸಿಕ್ಕ ಹಿನ್ನಲೆಯಲ್ಲಿ ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ನೇತೃತ್ವದಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಆರಕ್ಷಕ ನಿರೀಕ್ಷಕಿ ಸುಮಾರಾಣಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನಟರಾಜ್ ಅವರಿಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶ ಪ್ರತಿಯನ್ನು ನೀಡಿ ಕೂಡಲೇ ಕಾನೂನು ಕ್ರಮ ಕೈಗೊಂಡು ಅಕ್ರಮ ಕಟ್ಟಡದ ಕಾಮಗಾರಿ ನಿಲ್ಲಿಸಿ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆ ಕಾರು ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.