ಮಾಲೂರು ಜಡ್ಜ್‌ ರಸ್ತೆ ರಂಪಾಟಕ್ಕೆ ಹೈಕೋರ್ಟ್‌ ಗರಂ

KannadaprabhaNewsNetwork |  
Published : Jul 30, 2026, 04:15 AM ISTUpdated : Jul 30, 2026, 05:19 AM IST
High Court

ಸಾರಾಂಶ

ಸಾರ್ವಜನಿಕರೊಂದಿಗೆ ರಸ್ತೆ ರಂಪಾಟ ನಡೆಸಿದ  ಕ್ರಿಮಿನಲ್ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ  ಮಾಲೂರು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಗಾಯತ್ರಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವರ್ತನೆ ಅಧಿಕಾರ ದುರುಪಯೋಗಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ಅವರ ವಿರುದ್ಧ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದೆ.

 ಬೆಂಗಳೂರು :  ಸಾರ್ವಜನಿಕರೊಂದಿಗೆ ರಸ್ತೆ ರಂಪಾಟ ನಡೆಸಿದ ಮತ್ತು ಅವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ ಕೋಲಾರ ಜಿಲ್ಲೆಯ ಮಾಲೂರು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಗಾಯತ್ರಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವರ್ತನೆ ಅಧಿಕಾರ ದುರುಪಯೋಗಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ಅವರ ವಿರುದ್ಧ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದೆ.

ದ್ವಿಚಕ್ರ ಸವಾರರನ್ನು ತಡೆದು ಅವರೊಂದಿಗೆ ರಸ್ತೆ ರಂಪಾಟ

ನ್ಯಾಯಾಧೀಶೆ ಗಾಯತ್ರಿ ಅವರು ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಕಾರನ್ನು ಹಿಂದಿಕ್ಕಿದ ದ್ವಿಚಕ್ರ ಸವಾರರನ್ನು ತಡೆದು ಅವರೊಂದಿಗೆ ರಸ್ತೆ ರಂಪಾಟ ನಡೆಸಿದ್ದಲ್ಲದೆ, ಅವರ ವಿರುದ್ಧ ಮಾಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು. ಇದರಿಂದ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಕೆ.ಎಂ.ವಿನಯ್‌, ವಿ.ಕವಿತಾ ಮತ್ತು ಪಿ.ವೆಂಕಟೇಶ್‌ ಅವರು ಹೈಕೋರ್ಟ್ ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಘಟನೆ ಕುರಿತು ನ್ಯಾಯಾಧೀಶೆ ಗಾಯತ್ರಿ ಅವರ ರಸ್ತೆ ರಂಪಾಟದ ವಿಡಿಯೋವನ್ನು ಮೊಬೈಲ್‌ನಲ್ಲಿ ವೀಕ್ಷಿಸಿದರು. ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಮತ್ತು ಬೆಂಗಳೂರು ವಕೀಲರ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರಿಂದ ಘಟನೆ ಸಂಪೂರ್ಣ ಮಾಹಿತಿ ಪಡೆದರು.

ನಂತರ ನ್ಯಾಯಾಧೀಶೆ ಗಾಯತ್ರಿ ಅವರ ವರ್ತನೆ ಸರಿಯಲ್ಲ. ಈ ಬೀದಿ ಜಗಳ ನಿಜಕ್ಕೂ ಅನಪೇಕ್ಷಿತ. ನ್ಯಾಯಾಧೀಶರು ಸಾರ್ವಜನಿಕರ ನಂಬಿಕೆಯನ್ನು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಉಳಿಸಿಕೊಂಡರೆ ಸಾಲದು. ಅದನ್ನು ನಿತ್ಯದ ಸಾರ್ವಜನಿಕ ಬದುಕಿನಲ್ಲೂ ಅಳವಡಿಸಿಕೊಂಡಿರಬೇಕು. ಇಲ್ಲವಾದರೆ ನ್ಯಾಯಾಂಗದ ಮೇಲೆ ನಾಗರಿಕರು ಇಟ್ಟಿರುವ ನಂಬಿಕೆ ನಾಶವಾಗುತ್ತದೆ. ನ್ಯಾಯಾಧೀಶರಾದ ಮಾತ್ರಕ್ಕೆ ದರ್ಪ ಹಾಗೂ ಅಹಂಕಾರದಿಂದ ನಡೆದುಕೊಳ್ಳುವುದು ಸುತಾರಾಂ ಸಲ್ಲದು. ನ್ಯಾಯಾಲಯದ ಆಚೆಗೂ ಅವರು ತಮ್ಮ ಘನತೆ ಕಾಪಾಡಿಕೊಂಡು ಹೋಗಬೇಕು ಎಂದು ಸೂಚಿಸಿದರು.

ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತಡೆಯಾಜ್ಞೆ

ಅಲ್ಲದೆ, ಅರ್ಜಿದಾರರ ವಿರುದ್ಧ ನ್ಯಾಯಾಧೀಶೆ ಗಾಯತ್ರಿ ಅವರು ದಾಖಲಿಸಿದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಗಾಯತ್ರಿ ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಇಡಬೇಕು ಎಂದು ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ಘಟನೆಯ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವಿಡಿಯೋವನ್ನು ನ್ಯಾಯಮೂರ್ತಿಗಳಿಗೆ ತಮ್ಮ ಮೊಬೈಲ್‌ ಮೂಲಕ ಪ್ರದರ್ಶಿಸಿದರು. ಅಂತೆಯೇ, ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಇರುವುದನ್ನು ತೆಗೆದುಹಾಕುವಂತೆ ಗಾಯತ್ರಿ ಅವರೇ ದೂರು ನೀಡಿ ಅದಕ್ಕೆ ತಾವೇ ಆದೇಶ ಹೊರಡಿಸಿದ್ದಾರೆ. ಗಾಯತ್ರಿ ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲಲ್ಲ. ಇಂತಹುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕರಣದಲ್ಲಿ ಅರ್ಜಿದಾರರೂ ಆದ 69 ವರ್ಷದ ವೆಂಕಟೇಶ್‌ ಅವರನ್ನು ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಕರೆಸಿಕೊಂಡು ಬಂಧಿಸಲಾಗಿದೆ. ಈ ಹಿಂದೆ ತಮ್ಮ ಮನೆಯ ರಿಪೇರಿ ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ಕರೆಯಿಸಿಕೊಂಡಿದ್ದರು. ಆದರೆ ಅವರು ರಿಪೇರಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು ಎಂದು ವಿವರಿಸಿದರು.

ಈ ಮಾತಿಗೆ ದನಿಗೂಡಿಸಿದ ಬೆಂಗಳೂರು ವಕೀಲರ ಸಂಘದ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್‌ ಅವರು, ಈಗಾಗಲೇ ಘಟನೆಯ ಸಂಪೂರ್ಣ ವಿವರಣೆಯನ್ನು ಕೋಲಾರ ಜಿಲ್ಲೆಯ ಆಡಳಿತಾತ್ಮಕ ಉಸ್ತುವಾರಿಯೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ನ್ಯಾಯಾಧೀಶೆ ಗಾಯತ್ರಿ ಅವರು ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 126(2) (ಅಕ್ರಮ ನಿರ್ಬಂಧ), 132 (ಸರ್ಕಾರಿ ಅಧಿಕಾರಿ ಅಧಿಕೃತ ಕರ್ತವ್ಯ ನಿರ್ವಹಿಸದಂತೆ ತಡೆಯಲು ಅವರ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗಿಸುವುದು) 351(2) (ವ್ಯಕ್ತಿಯ ಖ್ಯಾತಿಗೆ ಹಾನಿಯುಂಟು ಮಾಡುವಂತಹ ಬೆದರಿಕೆ ಹಾಕುವುದು), 352 (ಉದ್ದೇಶಪೂರ್ವಕ ಅವಮಾನ), 74 (ಯಾವುದೇ ಮಹಿಳೆಯ ಶೀಲಕ್ಕೆ ಅಥವಾ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಮಾಡುವುದು ಅಥವಾ ಅಪರಾಧ ಶಕ್ತಿ ಬಳಸುವುದು) ಅಡಿಯಲ್ಲಿ ದೂರು ನೀಡಿದ್ದರು. ಅದರ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಡಿಯುವ ನೀರಿನಲ್ಲಿ ವಾಹನ ತೊಳೆದ್ರೆ 5 ಸಾವಿರ ರು. ದಂಡ
ಬೆಳ್ಳಂಬೆಳಗ್ಗೆ ಮೈದಾನದಲ್ಲಿರುಂಡ ಪತ್ತೆ: ಹೆಚ್ಚಿದ ಆತಂಕ