ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಹೈ ಕೋರ್ಟ್‌ ತಡೆ

KannadaprabhaNewsNetwork |  
Published : Jul 12, 2025, 12:32 AM IST
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  | Kannada Prabha

ಸಾರಾಂಶ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ವಕೀಲರಾದ ವಿನೋದ್ ಅವರು ಲೋಕಾಯುಕ್ತದಲ್ಲಿ ಹೂಡಿದ್ದ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ವಕೀಲರಾದ ವಿನೋದ್ ಅವರು ಲೋಕಾಯುಕ್ತದಲ್ಲಿ ಹೂಡಿದ್ದ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಈ ಸಂಬಂಧ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಕೀಲ ವಿನೋದ್ ಅವರು ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ಅಕ್ರಮ ಆಸ್ತಿ ಸಂಬಂಧಿಸಿದಂತೆ ಪದೇ ಪದೇ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಿದ್ದರು. ಅವರು ಒಂದೇ ಒಂದು ಕೇಸ್‌ನಲ್ಲೂ ಸಾಬೀತುಪಡಿಸಲು ಯಶಸ್ವಿಯಾಗಿಲ್ಲ. ಈ ಸಂಬಂಧ ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಕೂಡ ದಾಖಲು ಮಾಡಿದ್ದೆ. ಅದು ಕೂಡ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಅವರು ಹೈಕೋರ್ಟ್‌ನಲ್ಲಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದರು. ಹೈಕೋರ್ಟ್ ಅದನ್ನು ಕೆಳಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಸೂಚನೆ ನೀಡಿತ್ತು. ಅಲ್ಲಿ ಕೂಡ ಆ ಪ್ರಕರಣ ಡಿಸ್‌ಮಿಸ್ ಆಗಿತ್ತು. ಇತ್ತೀಚೆಗೆ ಮತ್ತೆ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದರು. ಅಲ್ಲಿ ಅವರು ಲೋಕಾಯುಕ್ತಕ್ಕೆ ದೂರು ನೀಡುವಂತೆ ಸೂಚನೆ ನೀಡಿದ್ದರು. ಲೋಕಾಯುಕ್ತದಿಂದ ನನಗೆ ಇದುವರೆಗೆ ನೋಟಿಸ್ ಬಂದಿಲ್ಲ. ಎಫ್.ಐ.ಆರ್. ಕಾಪಿನೂ ನನಗೆ ಲಭ್ಯವಾಗಿಲ್ಲ. ಆದರೆ, ನಾನು ಮಾಧ್ಯಮಗಳ ಸುದ್ದಿಯನ್ನು ನೋಡಿ ಹೈಕೋರ್ಟ್‌ಗೆ ತಡೆಯಾಜ್ಞೆ ಕೋರಿದ್ದೆ. ನನ್ನ ಅರ್ಜಿ ಪರಿಶೀಲನೆ ಮಾಡಿದ ಹೈಕೋರ್ಟ್ ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ. ಇದು ನನಗೆ ಸಿಕ್ಕಿದ ನೈತಿಕ ಜಯವಾಗಿದೆ. ನನ್ನ ಪರವಾಗಿ ಖ್ಯಾತ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ವಾದ ಮಂಡಿಸಿದ್ದರು ಎಂದು ತಿಳಿಸಿದರು. ಸಿಎಂ ಹೇಳಿಕೆ ಒಬ್ಬ ವ್ಯಕ್ತಿಯ ಅಭಿಪ್ರಾಯ:

ಸಿದ್ದರಾಮಯ್ಯ ಅವರು ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದು, ಇದು ಒಬ್ಬ ವ್ಯಕ್ತಿಯ ಅಭಿಪ್ರಾಯ. ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ನಾಯಕರು ಹೇಳಿದ್ದರೆ ಇದನ್ನು ನಂಬಬಹುದಿತ್ತು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ ಎಂದು ಹೇಳಿದರು.

ನನಗೆ ಈ ಬಗ್ಗೆ ತಕಾರಾರಿಲ್ಲ. ಆದರೆ, ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಕೂಡ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದು ಶಾಸಕಾಂಗ ಅಥವಾ ಪಕ್ಷದ ಹೈಕಮಾಂಡ್. ಆದರೆ, ಇವರೇ ತೀರ್ಮಾನ ಮಾಡುವುದು ಎಷ್ಟರಮಟ್ಟಿಗೆ ಸರಿ ? ಒನ್ ಮ್ಯಾನ್ ಶೋ ಮಾಡುತ್ತಿದ್ದಾರೆ. ನನಗೆ ಸಿಎಂ ಹೇಳಿಕೆ ಆಶ್ಚರ್ಯ ತಂದಿದೆ. ಪಕ್ಷದಲ್ಲೂ ಗೊಂದಲ, ರಾಜ್ಯದ ಜನರಲ್ಲೂ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನ ಕೇಂದ್ರ ನಾಯಕರು ಸ್ಪಷ್ಟನೆ ನೀಡಬೇಕು ಎಂದರು.

ಹಿಂದೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಲಿ. ಡಿ.ಕೆ.ಶಿವಕುಮಾರ್ ಅವರಿಗೆ ಕೆಲವೇ ಶಾಸಕರ ಬೆಂಬಲ ಮಾತ್ರವಿದೆ ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಈ ಮಾತನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಬೇಕಿತ್ತು. ಕೂಡಲೇ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಲಿ. ರಾಜ್ಯದ ಜನರಲ್ಲಿರುವ ಗೊಂದಲ ಬಗೆಹರಿಸಲಿ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ