ಸವಾಲುಗಳ ಮಧ್ಯೆ ವಿನಯ ಕುಲಕರ್ಣಿ ಮೇಲೆ ಬೆಟ್ಟದಷ್ಟು ನಿರೀಕ್ಷೆ!

KannadaprabhaNewsNetwork |  
Published : Aug 31, 2026, 02:15 AM IST
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ ಹೊಲವೊಂದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆ ಪರೀಕ್ಷಿಸುತ್ತಿರುವ ಶಾಸಕ ವಿನಯ ಕುಲಕರ್ಣಿ.  | Kannada Prabha

ಸಾರಾಂಶ

ಸುದೀರ್ಘ ಸಮಯದ ನಂತರ ಕ್ಷೇತ್ರ ಪ್ರವೇಶ ಮಾಡಿರುವ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮೇಲೆ ಗ್ರಾಮೀಣ ಕ್ಷೇತ್ರದ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಬಸವರಾಜ ಹಿರೇಮಠ

ಧಾರವಾಡ: ಸುದೀರ್ಘ ಸಮಯದ ನಂತರ ಕ್ಷೇತ್ರ ಪ್ರವೇಶ ಮಾಡಿರುವ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮೇಲೆ ಗ್ರಾಮೀಣ ಕ್ಷೇತ್ರದ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಇನ್ನುಳಿದ ಅವಧಿಯಲ್ಲಿ ಅವರು ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬಲ್ಲರು ಎಂಬ ಲೆಕ್ಕಾಚಾರ ಶುರುವಾಗಿವೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅವಧಿ ಮುಗಿದು ಐದಾರು ವರ್ಷಗಳಾಗಿವೆ. ಗ್ರಾಮ ಪಂಚಾಯಿತಿ ಅವಧಿ ಸಹ ಮುಗಿದ ವರ್ಷ ಸಮೀಪಿಸುತ್ತಿದೆ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ ಎಂದಾಗಿದೆ. ಇಂತಹ ಸಮಯದಲ್ಲಿ ಕ್ಷೇತ್ರ ನೋಡಿಕೊಳ್ಳಬೇಕಿದ್ದ ಶಾಸಕ ವಿನಯ ಕುಲಕರ್ಣಿ ಸಹ ಅನಿವಾರ್ಯವಾಗಿ ಹೊರಗಿದ್ದ ಕಾರಣ, ಒಂದರ್ಥದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರ ಅತಂತ್ರ ಹಾಗೂ ಅನಾಥ ಸ್ಥಿತಿಯಲ್ಲಿತ್ತು. ಇದೀಗ ವಿನಯ ಕುಲಕರ್ಣಿ ಕ್ಷೇತ್ರ ಪ್ರವೇಶ ಮಾಡಿದ್ದು, ಇರುವ ಸವಾಲು ಎದುರಿಸಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ಮಾಡಬೇಕಾದ ಅಗತ್ಯತೆ ಇದೆ.

ಬರದ ಸವಾಲು

ಕೃಷಿ ಕುಟುಂಬದಿಂದ ಬಂದ ವಿನಯ ಕುಲಕರ್ಣಿ ಅವರಿಗೆ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಬರದ ವಿಭಿನ್ನ ಸವಾಲು ಎದುರಾಗಿದೆ. ಈಗಾಗಲೇ ರಾಜ್ಯಾದ್ಯಂತ ಮಳೆಯ ಭಾವದಿಂದ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ಸರ್ಕಾರ ಘೋಷಿಸಿದ ಬರದ ಪಟ್ಟಿಯಲ್ಲಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ಯಾವ ತಾಲೂಕಿಲ್ಲ. ಆಗಾಗ ತುಸು ಮಳೆಯಾದರೂ ಕ್ಷೇತ್ರದ ಭೂಮಿ ಮಾತ್ರ ತಣ್ಣಗಿಲ್ಲ. ಹೊಲಗಳಲ್ಲಿ ಬೆಳೆಯು ಹಸಿರಾಗಿ ಕಂಡರೂ ಇಳುವರಿ ಇಲ್ಲ. ಒಂದು ರೀತಿಯಲ್ಲಿ ಹಸಿರು ಬರದ ಸ್ಥಿತಿ ಉಂಟಾಗಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ರೈತ ನಾಯಕನೊಬ್ಬ ಬಹು ಕಾಲದ ನಂತರ ಜಿಲ್ಲೆಗೆ ಪ್ರವೇಶ ಮಾಡಿರುವುದು, ಜನರ ನಿರೀಕ್ಷೆ ಇಮ್ಮಡಿಯಾಗಿರುವುದರಲ್ಲಿ ಸಂಶಯವಿಲ್ಲ.

ಇಮ್ಮಡಿಯಾದ ನಿರೀಕ್ಷೆಗಳು

ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೇರಿದಂತೆ ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ ಸೇರಿದಂತೆ ನಗರದ ಶಾಸಕರು ಬರದ ಬಗ್ಗೆ ಅಷ್ಟೇನೂ ಗಂಭೀರವಾಗಿ ಪರಿಗಣಿಸದ, ಸರ್ಕಾರಕ್ಕೆ ತಮ್ಮ ಕ್ಷೇತ್ರಗಳ ಬಗ್ಗೆ ಸರಿಯಾಗಿ ಧ್ವನಿ ಎತ್ತದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ತಾಲೂಕು ಬರಪಟ್ಟಿಯಲ್ಲಿ ಜಾಗ ಪಡೆಯಲಿಲ್ಲ. ಆದರೆ, ಸ್ವತಃ ಕೃಷಿಕರಾಗಿರುವ ವಿನಯ ಕುಲಕರ್ಣಿ ರೈತ, ಕೃಷಿ ಕೂಲಿ ಕಾರ್ಮಿಕರ ಪರ ಧ್ವನಿ ಉಳ್ಳಯವರಾಗಿ ಜಿಲ್ಲೆಯ ರೈತರ ಪರ ಧ್ವನಿ ಎತ್ತಲಿದ್ದಾರೆಯೇ? ರೈತರಿಗೆ ಬರ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವರೇ ಎಂಬ ಪ್ರಶ್ನೆ ಮೂಡಿದೆ. ಈ ಕಾರಣದಿಂದ ವಿನಯ ಅವರಿಗೆ ಈಗ ಕ್ಷೇತ್ರದ ಜನರ ಬೆನ್ನಿಗೆ ನಿಲ್ಲಬೇಕಾದ ಜವಾಬ್ದಾರಿ ಮೊದಲಿಗಿಂತಲೂ ಹೆಚ್ಚಿದೆ.

ಏನೇನು ಸವಾಲುಗಳು?

ನಮ್ಮ ಹೊಲ ನಮ್ಮ ದಾರಿ ಯೋಜನೆ ಇಡೀ ರಾಜ್ಯದಲ್ಲಿಯೇ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಯಶಸ್ಸು ಪಡೆದಿತ್ತು. ಅದಕ್ಕೆ ಕಾರಣ ವಿನಯ ಕುಲಕರ್ಣಿ. ಆದರೆ, ಅವರ ಅನುಪಸ್ಥಿತಿಯಲ್ಲಿ ಈ ಯೋಜನೆಯಲ್ಲಿ ಪ್ರಗತಿಯಾಗಿಲ್ಲ. ಹಾಗೆಯೇ, ಗ್ರಾಮೀಣ ಪ್ರಮುಖ ರಸ್ತೆಗಳು, ಮೂಲಭೂತ ಸೌಕರ್ಯಗಳು, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಭ್ರಷ್ಟಾಚಾರ ನಿಯಂತ್ರಣ ಹಾಗೂ ಗ್ಯಾರಂಟಿ ಯೋಜನೆಗಳು ಸರಿಯಾಗಿ ಫಲಾನುಭವಿಗಳಿಗೆ ತಲುಪಿಯೇ ಎಂಬುದನ್ನು ಸಹ ನಿಭಾಯಿಸಬೇಕಿದೆ. ಹಾಗೆಯೇ, ಅವರಿಲ್ಲದ ಸಮಯದಲ್ಲಿ ಕ್ಷೇತ್ರದ ಯಾದವಾಡ-ಪುಡಕಲಕಟ್ಟಿಯಲ್ಲಿ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ನಿರ್ಮಾಣವಾಗುತ್ತಿದ್ದು, ಇನ್ನೇನು ಉದ್ಘಾಟನೆಯ ಹಂತದಲ್ಲಿದೆ. ಈ ಕಾರ್ಖಾನೆಯಿಂದ ಸುತ್ತಲಿನ ಯಾವ ಗ್ರಾಮಗಳಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ.

ಒಟ್ಟಾರೆ, ತಮ್ಮ ರಾಜಕೀಯ ವಿರೋಧಿಗಳನ್ನು ಎದುರಿಸಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು, ಎಲ್ಲ ಸಮುದಾಯ, ವರ್ಗಗಳನ್ನು ಸೌಹಾರ್ದತೆಯಿಂದ ಕಾಯ್ದುಕೊಳ್ಳುವ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ವಿನಯ ಕುಲಕರ್ಣಿ ಹೊತ್ತುಕೊಳ್ಳುವುದು ಸಾಮಾನ್ಯದ ಮಾತಲ್ಲ.

ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಲ್ಲಿಯೇ ಹೊಲಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅರಿತಿದ್ದೇನೆ. ಕ್ಷೇತ್ರದ ಅಭಿವೃದ್ದಿ ಬಗ್ಗೆಯೇ ಚಿಂತನೆಗಳು ನಡೆದಿವೆ. ಬರಪಟ್ಟಿಯಿಂದ ಧಾರವಾಡ ಕೈ ಬಿಟ್ಟಿರುವುದು ತಮಗೂ ಬೇಸರ ಮೂಡಿಸಿದ್ದು, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡುತ್ತೇನೆ. ನನ್ನ ಮೇಲಿರುವ ಜವಾಬ್ದಾರಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಭರವಸೆ ನನಗಿದೆ ಎಂದು ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಬಿಲ್ ಬಿಡುಗಡೆಗಾಗಿ ಮುಂದುವರಿದ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛತೆ