ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಅವರು, ಸುಮಾರು 60ರಷ್ಟು ಮಳೆಯಾಶ್ರಯವನ್ನು ನಂಬಿರುವ ಕೃಷಿಕರು, ರೈತರು ನಮ್ಮ ರಾಜ್ಯದಲ್ಲಿದ್ದಾರೆ. ಅವರು ಬರಗಾಲ ಬಂದಾಗ ಆಹಾರಕ್ಕೆ, ದನಕರುಗಳ ಮೇವಿಗೂ ಕೂಡ ಹಾಹಾಕಾರ ಪಡುತ್ತಾರೆ. ನಮ್ಮ ಭಾಗದ ಜಮೀನು ಕೃಷ್ಣರಾಜ ಸಾಗರ ಆಣೆಕಟ್ಟಿಗೆ ಮುಳುಗಡೆಯಾಗಿದೆ. ಡ್ಯಾಂ ನ ನೀರು ಕೆಳಗಡೆ ಹೋಗುತ್ತದೆ. ಆದರೆ ನಮ್ಮ ಕ್ಷೇತ್ರದ ನೀರಾವರಿ ಆಗುವುದಿಲ್ಲ. ಆ ಕಡೆ ಕಬಿನಿ ಇದೆ, ಅದರ ಪಕ್ಕದಲ್ಲಿ ಖುಷ್ಕಿ ಜಮೀನುಗಳಿವೆ, ಇದರಿಂದ ನಮ್ಮ ಕ್ಷೇತ್ರದಲ್ಲಿ ದೊಡ್ಡಮಾರಗೌಡನಹಳ್ಳಿ ವ್ಯಾಪ್ತಿಯಲ್ಲಿ ಕಮರಳ್ಳಿ ಕೆರೆ, ದೊಡ್ಡಮಾರಗೌಡನಹಳ್ಳಿ ಕೆರೆ, ನುಗ್ಗಳ್ಳಿ ಕೆರೆ, ಶೆಟ್ಟಿನಾಯಕಹಳ್ಳಿ ಕೆರೆ, ಮಾದಳ್ಳಿ ಕೆರೆ, ಕೆರೆಹುಂಡಿ ಕೆರೆ, ಕುಮಾರಬೀಡು ಕೆರೆ, ಮೂಗನಹುಂಡಿ ಕೆರೆ ಸೇರಿದಂತೆ 20 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 73 ಕೋಟಿ ರು. ಅಂದಾಜು ಪಟ್ಟಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿ, ಕಳೆದ 2 ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ ಎಂದರು.
ಆದರೆ, ಇದುವರೆಗೂ ಕೂಡ ಈ ಯೋಜನೆ ಜಾರಿಯಾಗಿಲ್ಲ. ಆದ್ದರಿಂದ ಈ ರೀತಿಯ ಏತ ನೀರಾವರಿ ಯೋಜನೆಗಳು ಜಾರಿಗೊಂಡರೆ ರೈತರಿಗೆ ಅನುಕೂಲವಾಗುತ್ತದೆ. ಈಗಲಾದರೂ ಮಂಜೂರು ಮಾಡಬೇಕಾಗಿ ಮುಖ್ಯಮಂತ್ರಿಗಳಲ್ಲಿ ಕೋರಿದರು.ಸಿದ್ದರಾಮಯ್ಯ ಅವರು 1994ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿ ನನ್ನ ಪುಟ್ಟ ಬಾಡಿಗೆ ಮನೆಯಲ್ಲೇ ನಾನು ಸಿದ್ದರಾಮಯ್ಯ ಅವರು ಇಬ್ಬರೇ ಚುನಾವಣಾ ಪ್ರಚಾರ ಮಾಡಿ 35,500 ಮತಗಳಿಂದ ಗೆದ್ದಿದ್ದರು. ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರನ್ನಾಗಿ ಮಾಡಿದ್ದರು. ಆ ವೇಳೆ ಯಾವುದೋ ಒಂದು ಪತ್ರಿಕೆಯಲ್ಲಿ ದನಕಾಯುವವ ಮುಖ್ಯಮಂತ್ರಿಯಾಗಿದ್ದಾರೆ. ಕುರಿ ಕಾಯುವವ ಹಣಕಾಸು ಸಚಿವರಾಗಿದ್ದಾರೆ ಎಂದು ಸುದ್ಧಿ ಮಾಡಿದ್ದರು. ಆದರೆ ರೈತರ ಮಕ್ಕಳು ಅಧಿಕಾರ ಸಿಕ್ಕಾಗ ಸಮರ್ಥವಾಗಿ ಆಳುತ್ತಾರೆ ಎನ್ನುವುದಕ್ಕೆ ಇವರೇ ಸಾಕ್ಷಿ ಎಂದರು.
ರಾಜ್ಯದ ಜನರ ನಿರೀಕ್ಷೆಗಳು ಬೆಟ್ಟದಷ್ಟಿದೆ, ಆದರೆ ಯಾರೇ ಮುಖ್ಯಮಂತ್ರಿಗಳಾದರು ನಿರೀಕ್ಷೆಗಳನ್ನು ಈಡೇರಿಸುವುದಕ್ಕೆ ಆಗುವುದಿಲ್ಲ. ಆದರೆ ಈಗಿನ ಬಜೆಟ್ ನಲ್ಲಿ ಸ್ವಲ್ಪ ಮಟ್ಟಿಗೆ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆ ಗಮನ ಹರಿಸಿದೆ. ಹಿಂದಿನ ಬಜೆಟ್ ನಲ್ಲಿ ಗ್ಯಾರಂಟಿಗಳ ಮಧ್ಯೆ ಅಭಿವೃದ್ದಿ ಕಳೆದು ಹೋಗಿತ್ತು. ಈ ಬಾರಿ ಅಭಿವೃದ್ಧಿ ಕೆಲಸಗಳು ಚೇತರಿಸಿಕೊಳ್ಳುವ ನೀರಿಕ್ಷೆ ಇದೆ, ಇದಕ್ಕೆ ಮೂಲ ಕಾರಣ ಹೆಚ್ಚಾದ ರಾಜ್ಯದ ಬಜೆಟ್ ಗಾತ್ರ. ಬಜೆಟ್ ಗಾತ್ರ ಹೆಚ್ಚಿಸಿರುವುದರಿಂದ ಗ್ಯಾರಂಟಿಗಳಿಗೂ ಕೂಡ ಮೀಸಲಿಟ್ಟಿರುವುದರ ಜೊತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಕೂಡ ಹಣ ಒದಗಿಸಲು ಸಾಧ್ಯವಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ, ಕೃಷಿ,ಕೃಷಿ ತಾಂತ್ರಿಕ ವರ್ಗಾವಣೆ, ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳ ಸುಧಾರಣೆ, ಕೃಷಿ ಅರಣ್ಯಕ್ಕೆ ಪ್ರೋತ್ಸಾಹ, ರೈತರಿಗೆ ನೀಡುತ್ತಿರುವ 4 ಸಾವಿರ ರೂ. ನಿಲ್ಲಿಸಿರುವುದು, ಕೃಷಿ ವಿವಿಗಳ ಕಾರ್ಯವೈಕರಿಯ ಬಗ್ಗೆ ಅವಲೋಕನ, ನೀರಾವರಿ ಪದ್ಧತಿ, ವಸತಿ, ಸ್ಮಶಾನ, ವಿದ್ಯುತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ಸಹಕಾರ ಇಲಾಖೆಗೆ ಅನುದಾನ ನೀಡಿರುವುದಾಗಿ ಅವರು ಹೇಳಿದರು.