ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕರಡಿ ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೦೬ರಿಂದ ನ್ಯಾಕೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನ್ಯಾಕೇನಹಳ್ಳಿಯ ಬಸವಣ್ಣ ದೇವಸ್ಥಾನದ ಬಳಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನ ಎಲ್ಲ ಗ್ರಾಮಗಳಿಗೂ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸಿ ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಒದಗಿಸಬೇಕೆಂಬುದು ನಮ್ಮ ಅಭಿಲಾಷೆಯಾಗಿದ್ದು ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.ನ್ಯಾಕೇನಹಳ್ಳಿ-ಕರಡಿ ರಸ್ತೆಯ ಜೊತೆಗೆ ಸಿಡ್ಲೇಹಳ್ಳಿ ಗ್ರಾಮದಿಂದ ಅಣ್ಣಾಮಾರನಹಳ್ಳಿ ಗ್ರಾಮದ ಮಾರ್ಗವಾಗಿ ತಿಪಟೂರು ಚಿಕ್ಕನಾಯಕನಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ೧ ಕೋಟಿ ರು ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಇದರ ಜೊತೆಗೆ ತಾಲೂಕಿನ ಸಿಡ್ಲೇಹಳ್ಳಿ-ಅಣ್ಣಾ ಮಾರನಹಳ್ಳಿ ರಸ್ತೆಯಿಂದ ನ್ಯಾಕೇನಹಳ್ಳಿ ಗಾಮಕ್ಕೆ ಸಂಪರ್ಕಿಸುವ ೮೫ಲಕ್ಷ ರೂಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯೂ ಸೇರಿ ಒಟ್ಟು ೪.೮ ಕೋಟಿರುಗಳ ವೆಚ್ಚದಲ್ಲಿ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಸರಕಾರ ಎಲ್ಲ ಅಭಿವೃದ್ದಿ ಕಾಮಗಾರಿಗಳ ಜೊತೆಗೆ ಜನರಿಗೆ ಗ್ಯಾರಂಟಿ ಯೋಜನೆಗಳನ್ನೂ ನೀಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳಿಂದ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ರೂ.೨೦೦೦ ಪ್ರತಿ ತಿಂಗಳೂ ತಲುಪುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಜನಪ್ರಿಯವಾಗಿದೆ. ಗೃಹಜ್ಯೋತಿಯ ಮೂಲಕ ಪ್ರತಿ ಮನೆಗೂ ೨೦೦ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನಭಾಗ್ಯ ಮೂಲಕ ನೀಡಲಾಗುತ್ತಿರುವ ೧೦ ಕೆಜಿ ಅಕ್ಕಿಯ ಬದಲು ಇನ್ನು ಮುಂದೆ ೫ ಕೆಜಿ ನೀಡಿ ಉಳಿದ ೫ಕೆಜಿ ಬದಲಿಗೆ ಎಣ್ಣೆ, ಬೇಳೆ, ಕಾಳು, ಸಕ್ಕರೆ, ಉಪ್ಪು ನೀಡಲಾಗುವುದು ಎಂದರು.ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನ್ಯಾಕೇನಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ, ಸಣ್ಣನೀರಾವರಿ ಇಲಾಖೆ ಎಇಇ ದೊಡ್ಡಯ್ಯ, ಹಾಗೂ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.