ಗ್ರಾಮೀಣ ಭಾಗದ ಸಂಪರ್ಕ ಸುಧಾರಣೆಗೆ ಹೆಚ್ಚಿನ ಆದ್ಯತೆ

KannadaprabhaNewsNetwork |  
Published : Nov 10, 2025, 01:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಮ್ಯಾದನಹೊಳೆ ಹಾಗೂ ಸಮುದ್ರದಹಳ್ಳಿ ಗ್ರಾಮಗಳ ನಡುವಿನ ನೂತನ ಸೇತುವೆಯನ್ನು ಸಚಿವ ಡಿ.ಸುಧಾಕರ್ ಉದ್ಘಾಟನೆ ಮಾಡಿದರು.

ಸಚಿವ ಸುಧಾಕರ್ ಹೇಳಿಕೆ । ಮ್ಯಾದನಹೊಳೆ-ಸಮುದ್ರದಹಳ್ಳಿ ನಡುವಿವ ನೂತನ ಸೇತುವೆ ಉದ್ಘಾಟನೆಕನ್ನಡಪ್ರಭ ವಾರ್ತೆ ಹಿರಿಯೂರು

ಗ್ರಾಮೀಣ ಭಾಗದ ಸಂಪರ್ಕ ಸುಧಾರಣೆಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.

ತಾಲೂಕಿನ ಮ್ಯಾದನಹೊಳೆ ಹಾಗೂ ಸಮುದ್ರದಹಳ್ಳಿ ಗ್ರಾಮಗಳ ನಡುವಿನ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ ನೂತನ ಸೇತುವೆ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.

ಕಳೆದ ಮೂರು ವರ್ಷಗಳ ಹಿಂದೆ ಸೇತುವೆ ಮುರಿದು ಬಿದ್ದು ಎರಡು ಗ್ರಾಮಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಅಲ್ಲದೆ ನೂರಾರು ವಿದ್ಯಾರ್ಥಿಗಳು, ರೈತರ ಸರಕು ಸಾಗಾಣಿಕೆಗೆ ತೊಂದರೆ ಅನುಭವಿಸುತ್ತಿದ್ದರು. 9.75 ಕೋಟಿ ರು. ವೆಚ್ಚದಲ್ಲಿ 116 ಮೀ ಉದ್ದದ ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣದಿಂದ ಎರಡು ಗ್ರಾಮಗಳ ಜನರಿಗೆ ಸುಗಮ ಪ್ರಯಾಣಕ್ಕೆ ಅನುಕೂಲವಾಗಿದ್ದು ವಿದ್ಯಾರ್ಥಿಗಳ ಓಡಾಟಕ್ಕೂ ಸಹಕಾರಿಯಾಗಿದೆ. ಮತದಾರರ ಋಣ ತೀರಿಸುವ ಕೆಲಸವನ್ನು ನಾನು ಪ್ರತಿ ಸಲ ಗೆದ್ದಾಗಲೂ ಮಾಡುತ್ತಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ. ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಆದ್ಯತೆ ನೀಡಿದ್ದು ನೂರಾರು ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಫಲಿತಾಂಶ ವೃದ್ಧಿಗೆ ಸಾಕಷ್ಟು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ಬಡವರಿಗೂ ತಲುಪಿಸುವುದೇ ನಮ್ಮ ಉದ್ದೇಶವಾಗಿದೆ.ಗ್ಯಾರಂಟಿ ಯೋಜನೆಗಳು ಜನರ ಮನಸ್ಸನ್ನು ಗೆದ್ದಿದ್ದು ಅವುಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.ನಗರ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದು ಬರುವ ದಿನಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳ ನವೀಕರಣಕ್ಕೂ ಆದ್ಯತೆ ನೀಡಲಾಗುವುದು. 1982 ರಲ್ಲಿ ನಿರ್ಮಾಣ ಮಾಡಿದ ಸೇತುವೆ 2022 ಸೆಪ್ಟೆಂಬರ್ 20ರಂದು ಭಾರೀ ಮಳೆಗೆ ಮುರಿದು ಬಿದ್ದಿತ್ತು.ಇದೀಗ ಈ ಸಮಸ್ಯೆಯಿಂದ ಜನರಿಗೆ ಮುಕ್ತಿ ಸಿಕ್ಕಂತಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು.

ಸದನದಲ್ಲಿ ಸೇತುವೆ ಕುರಿತು ಶಾಸಕಿ ಪೂರ್ಣಿಮಾ ಪ್ರಸ್ತಾಪ:

ಹಿರಯೂರು ತಾಲೂಕಿನ ಮ್ಯಾದನ ಹೊಳೆ ಬಳಿಯ ಸೇತುವೆ ಮುರಿದು ಬಿದ್ದದ್ದು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಆಗಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇತುವೆ ಮುರಿದು ಬಿದ್ದದ್ದನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ವೇಣುಕಲ್ಲುಗುಡ್ಡ ಸೇರಿದಂತೆ ಸುಮಾರು ಎಂಟು ಹಳ್ಳಿಗಳ ಜೊತೆಗೆ ಪಕ್ಕದ ಶಿರಾ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಇದಾಗಿತ್ತು.ಸೇತುವೆ ಮರು ನಿರ್ಮಾಣಕ್ಕೆ ಎರಡು ಬಾರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 9.75 ಕೋಟಿ ರು. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣವಾಗಿದ್ದು ಆ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್