ಕನ್ನಡಪ್ರಭ ವಾರ್ತೆ ಪುತ್ತೂರು
ದಿನ ದಿನವೂ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ. ಎಲ್ಲೆಡೆ ಬಿಸಿಲಿನ ಬೇಗೆಯೊಂದಿಗೆ ಬಿಸಿಗಾಳಿಯೂ ಬೀಸುತ್ತಿದೆ. ಬಿಸಿಗಾಳಿ ಬಗ್ಗೆ ಮುನ್ನೆಚ್ಚರಿಕೆ ನೀಡಿರುವ ಹವಮಾನ ಇಲಾಖೆಯು ಬಿಸಿಲಿಗೆ ಮನೆಯಿಂದ ಹೊರಬಾರದೆ ಶಾಖಾಘಾತದಿಂದ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಈ ನಡುವೆ ಬಿಸಿಲ ಧಗೆಯನ್ನು ತಡೆಯಲು ಹೊಸತೊಂದು ಪ್ರಯತ್ನ ನಡೆಸಲಾಗಿದೆ. ಪುತ್ತೂರು ನಗರದ ಪರ್ಲಡ್ಕದಲ್ಲಿರುವ ಹಂಚಿನ ಮನೆಯೊಂದರ ಮೇಲೆ ಸ್ಪ್ರಿಂಕ್ಲರ್ ಅಳವಡಿಸಿ ನೀರು ಚಿಮ್ಮಿಸಿ ಮನೆಯನ್ನು ಕೂಲ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.ಸಾಮಾನ್ಯವಾಗಿ ಅಡಕೆ ತೋಟ, ತೆಂಗಿನ ತೋಪುಗಳಲ್ಲಿ ಕೃಷಿಗೆ ನೀರು ಚಿಮ್ಮಿಸಲು, ಮನೆಗಳ ಮುಂಭಾಗದಲ್ಲಿರುವ ಕೈತೋಟ, ಹೂದೋಟಗಳಿಗೆ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿಯ ಬಿರು ಬಿಸಿಲಿನ ಕಾರಣದಿಂದಾಗಿ ತೋಟಗಳೂ ನೀರಿನ ಅಭಾವದಿಂದಾಗಿ ಸೊರಗುತ್ತಿವೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಒಂದೆರಡು ಬಾರಿಯಾದರೂ ಮಳೆ ಸುರಿದು ಧರೆಯನ್ನು ತಂಪಾಗಿಸಿ ಒಂದಷ್ಟು ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಬಂದಿಲ್ಲ.
ಇದೀಗ ಎಲ್ಲೆಡೆ ಆರ್‌ಸಿಸಿ ಮನೆಗಳೇ ಹೆಚ್ಚು ಕಾಣಸಿಗುತ್ತದೆ. ಅವುಗಳ ನಡುವೆ ಅಲ್ಲಲ್ಲಿ ಕೆಲವೊಂದು ಹಂಚಿನ ಮನೆಗಳಿವೆ. ಪರ್ಲಡ್ಕದಲ್ಲಿರುವ ಹಂಚಿನ ಮನೆಯೊಂದರ ಮೇಲೆ ತೋಟಕ್ಕೆ ಅಳವಡಿಸುವಂತೆ ಸ್ಪ್ರಿಂಕ್ಲರ್ ಅಳವಡಿಸಿ ಮನೆಯನ್ನು ತಂಪಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಆರ್‌ಸಿಸಿ ಮನೆಗಳಿಗೆ ಹೋಲಿಸಿದಲ್ಲಿ ಹಂಚಿನ ಮನೆಗಳು ಸ್ಪಲ್ಪ ಮಟ್ಟಿಗೆ ತಂಪು ನೀಡುತ್ತದೆ. ಆದರೆ ಈ ಬಾರಿಯ ಸೆಖೆಗೆ ಹಂಚಿನ ಮನೆಯ ಒಳಗಡೆಯೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಗಲು ಮಾತ್ರವಲ್ಲದೆ ರಾತ್ರಿಯ ವೇಳೆಯಲ್ಲಿ ಸೆಖೆಯ ಅಗಾಧತೆ ಎಲ್ಲರನ್ನು ಕಾಡುತ್ತಿದೆ. ಮನೆಯಲ್ಲಿರುವ ಫ್ಯಾನ್ ಗಾಳಿಯೂ ಬಿಸಿಯಾಗಿ ನಿದ್ದೆಯಿಲ್ಲದಂತೆ ಮಾಡುತ್ತಿದೆ. ಎಸಿಯೂ ಈ ಸೆಖೆಗೆ ಪ್ರಯೋಜನಕ್ಕಿಲ್ಲ ಎಂಬಂತಾಗಿದೆ. ಅದನ್ನು ತಡೆಯಲು ಈ ಮನೆಯ ಮೇಲೆ ಸ್ಪ್ರಿಂಕ್ಲರ್ ಅಳವಡಿಸಿ ಮನೆಯನ್ನೇ ತಂಪಾಗಿಸುವ ಉಪಾಯ ಕಂಡುಕೊಂಡಿದ್ದಾರೆ. ಪುತ್ತೂರು ನಗರದ ಪರ್ಲಡ್ಕದಲ್ಲಿನ ಡಾ. ಶಿವರಾಮ ಕಾರಂತರ ಬಾಲವನದ ಪಕ್ಕದಲ್ಲಿರುವ ಹಂಚಿನ ಮನೆಯೊಂದರಲ್ಲಿ ಈ ಚಿತ್ರಣ ಕಾಣಬಹುದು. ಈ ಭಾಗದಲ್ಲಿ ಪ್ರಯಾಣಿಸುವವರು ಸೋಜಿಗದಿಂದ ನೋಡುತ್ತಿದ್ದಾರೆ.