ಕನ್ನಡಪ್ರಭ ವಾರ್ತೆ ಹಲಗೂರು
ಕೆಆರ್‌ಎಸ್ ಹಾಗೂ ಕಬಿನಿಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮುತ್ತತ್ತಿ ಗ್ರಾಮದ ಗರ್ಭಿಣಿಯನ್ನು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಗುರುವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು.ಕಾವೇರಿ ನದಿ ತುಂಬಿ ಹರಿದು ಮುತ್ತತ್ತಿಯಿಂದ ಹಲಗೂರಿಗೆ ಬರುವ ಮಾರ್ಗ ಮಧ್ಯ ಇರುವ ಕೆಸರಕ್ಕಿ ಹಳ್ಳದ ಸೇತುವೆ ನೀರು ತುಂಬಿ ಸಂಚಾರಕ್ಕೆ ತೊಂದರೆ ಆಗಿರುವುದರಿಂದ ಮುತ್ತತ್ತಿ ಗ್ರಾಮದ ರಾಜು ಅವರ ಪತ್ನಿ ಅನು ಅವರು ತುಂಬು ಗರ್ಭಿಣಿಯಾಗಿದ್ದು , ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತದ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅನು ಕುಟುಂಬವನ್ನು ಭೇಟಿ ಮಾಡಿ ಸ್ಥಳಾಂತರ ಮಾಡಲು ಮನವಿ ಮಾಡಿತು.
ರಾತ್ರಿ ಸಮಯದಲ್ಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ಆಸ್ಪತ್ರೆಗೆ ಕರೆದೊಯ್ಯಲು ತುಂಬಾ ತೊಂದರೆಯಾಗುತ್ತದೆ ಎಂಬುದನ್ನು ಅರಿತು ಆಶಾ ಕಾರ್ಯಕರ್ತೆ ತಾಲೂಕು ದಂಡಾಧಿಕಾರಿ ಲೋಕೇಶ್ ಅವರಿಗೆ ವಿಷಯ ತಿಳಿಸಿದ್ದರು.ತಹಸೀಲ್ದಾರ್ ಸೂಚನೆ ಮೇರೆಗೆ ತಕ್ಷಣ ತಮ್ಮ ಸಿಬ್ಬಂದಿಯ ಜೊತೆ ಮುತ್ತತ್ತಿ ಗ್ರಾಮಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆ
ಅನು ಅವರ ತವರು ಮನೆ ಕನಕಪುರ ತಾಲೂಕು ಸಾತನೂರು ಹೋಬಳಿಯ ಅಚ್ಚಲು ಗ್ರಾಮಕ್ಕೆ ಕಳಿಸಿಕೊಡಲಾಗಿದೆ.ಈ ಕುರಿತು ತಹಸೀಲ್ದಾರ್ ಲೋಕೇಶ್ ಮಾತನಾಡಿ, ಮುತ್ತತ್ತಿ ಗ್ರಾಮದ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವಸ್ತುಗಳು, ಔಷಧಿ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. ಸ್ಥಳದಲ್ಲೇ ಆರೋಗ್ಯ ಸಿಬ್ಬಂದಿಯೊಂದಿಗೆ ಆಂಬ್ಯುಲೆನ್ಸ್ ಇರಿಸಲಾಗಿದೆ ಎಂದರು.
ಕೆಸರಕ್ಕಿ ಹಳ್ಳದ ರಸ್ತೆ ನೀರು ತುಂಬಿ ಕೊಂಡಿರುವುದರಿಂದ ಜನರು ಅಗತ್ಯ ಇರುವಡೆಗೆ ಹೋಗಿ ಬರಲು ಭೀಮೇಶ್ವರಿಯ ಕಾವೇರಿ ಫಿಶಿಂಗ್ ಕ್ಯಾಂಪ್ ನ ಸಿಬ್ಬಂದಿಗಳಿಂದ ತೆಪ್ಪದ ವ್ಯವಸ್ಥೆ ಮಾಡಲಾಗಿದೆ ಎಂಸಿದರು.ಈ ವೇಳೆ ತಹಸೀಲ್ದಾರ್ ಲೋಕೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯ ಅಧಿಕಾರಿ ಡಾ..ಪಿ. ವೀರಭದ್ರಪ್ಪ, ಡಾ.ಉದಯಕುಮಾರ್, ಪಿಡಿಒ ಮಲ್ಲಿಕಾರ್ಜುನ, ಫಾರ್ಮಸಿ ಅಧಿಕಾರಿ ಶಿವಕುಮಾರ್, ಶ್ವೇತಾ ಸೇರಿದಂತೆ ಹಲವರು ಇದ್ದರು.