ಕನ್ನಡಪ್ರಭ ವಾರ್ತೆ ಹರಿಹರ
ಯುವಜನತೆಯ ಉನ್ನತ ವ್ಯಾಸಂಗ ದೇಶದ ಅಭಿವೃದ್ಧಿಗೆ ಪೂರಕ ಎಂದು ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಅಧ್ಯಕ್ಷ ಹಾಗೂ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ನುಡಿದರು.ನಗರದ ಮಹಾತ್ಮಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಸಮಿತಿಯಿಂದ ಗುರುವಾರ ಆಯೋಜಿಸಿದ್ದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿ, ಯುವಕರು ದೇಶದ ಬೆನ್ನೆಲುಬು ಉತ್ತಮ ಶಿಕ್ಷಣ, ಉನ್ನತ ವ್ಯಾಸಂಗ ಮಾಡುವ ಮೂಲಕ ಪ್ರಪಂಚದಲ್ಲಿಯೇ ಭಾರತ ದೇಶವನ್ನು ಅಭಿವೃದ್ಧಿ ಶೀಲ ದೇಶಗಳಲ್ಲಿ ಮೊಟ್ಟ ಮೊದಲ ಸ್ಥಾನಕ್ಕೆ ಕರೆದೊಯಿರಿ. ದೇಶದ ಸ್ವಾತಂತ್ರ್ಯಕ್ಕೆ ಭಗತ್‍ಸಿಂಗ್, ಮಂಗಲ್ ಪಾಂಡೆ, ಚಂದ್ರಶೇಖರ್ ಆಜಾದ್, ಕಿತ್ತೂರು ಚನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಬಾಲಗಂಗಾಧರ ತಿಲಕ್, ಲಾಲಾ ಲಜಪತ ರಾಯ್, ವಿನಾಯಕ ದಾಮೋದರ ಸಾವರ್ಕರ್, ವಿನೋಬಾ ಬಾವೆ ಸೇರಿದಂತೆ ಅನೇಕರು ಮಹಾತ್ಮ ಗಾಂಧಿ, ನೆಹರು ಜತೆ ಹೋರಾಟ ಮಾಡಿದ್ದರು. ಅವರಗಳ ದೇಶಭಕ್ತಿ ಯಾವತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಪಿ.ಹರೀಶ್ ಉನ್ನತ ನಾಯಕತ್ವ ದೇಶವನ್ನು ಅಭಿವೃದ್ಧಿ ಎಡೆಗೆ ಕರೆದೊಯ್ಯುತ್ತದೆ. ಒಂದೊಮ್ಮೆ ಬಡ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ ಇಂದು ವಿಶ್ವಗುರು ಪಥದೆಡೆ ಚಲಿಸುತ್ತಿದೆ. ಕೋವಿಡ್ ಕಾಲದಲ್ಲಿ ಭಾರತ ಕೆಳ ಮಟ್ಟಕ್ಕೆ ಇಳಿಯುತ್ತದೆ ಎಂದುಕೊಂಡ ಅನೇಕ ಬಡ ದೇಶಗಳಿಗೆ ಉಚಿತ ಲಸಿಗೆ ನೀಡುವ ಮೂಲಕ ತಿರುಗೇಟು ನೀಡುವ ಮಟ್ಟಕ್ಕೆ ತಲುಪಿದೆ ಎಂದರು.ಕಳೆದ ವರ್ಷ ಮಳೆ ಇಲ್ಲದೆ ಬರ ಪರಿಸ್ಥಿತಿ ಎದುರಾಗಿತ್ತು. ಪ್ರಸ್ತುತ ಈ ಬಾರಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಡ್ಯಾಂಗಳು ತುಂಬಿವೆ. ಆದರೆ ನಾಲೆಗಳಲ್ಲಿರುವ ಹೂಳು ತೆಗೆಸುವುದು, ರಿಪೇರಿ ಮಾಡಿಸುವುದು ಆಗದಂತ ಪರಿಸ್ಥಿಗೆ ರಾಜ್ಯ ಸರ್ಕಾರ ತಲುಪಿದೆ. ಅದಕ್ಕೆ ಕಾರಣ ರಾಜ್ಯದಲ್ಲಿ ನೀಡುತ್ತಿರುವ ಉಚಿತ ಕೊಡುಗೆಗಳೆ ಕಾರಣ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿಂಡಸಗಟ್ಟ ಗ್ರಾಮದ ರಾಮನಗೌಡ, ಬೆಂಗಳೂರಿನ ಹೆಲ್ಪ್ ಟು ಎಜುಕೇಶನಲ್ ಪೌಂಡೇಷನ್ ಟ್ರಸ್ಟ್ ಮುಖ್ಯಸ್ಥ ವೆಂಕಟೇಶ್, ಗಿರಿಯಮ್ಮ ಕಾಂತಪ್ಪ ಶ್ರೇಷ್ಠು ಮಹಿಳಾ ಪದವಿ ಪೂರ್ವ ಕಾಲೇಜಿನ ಟಿ.ಡಿ. ಸುಜಾತ, ಬೆಂಗಳೂರಿನ ಮಾರವಾಡಿ ಯುವ ಮಂಚ್‍ನ ಮುಖ್ಯಸ್ಥ ಅಂಕಿತ್ ಮೋದಿರನ್ನು ಸನ್ಮಾನಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ದೊಡ್ಡಬಾತಿ, ಪೌರಾಯುಕ್ತ ಪಿ. ಸುಬ್ರಮಣ್ಯ ಶೆಟ್ಟಿ, ಅರಕ್ಷಕ ವೃತ್ತ ನಿರೀಕ್ಷಕ ಎಸ್. ದೇವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಇಓ ಎಸ್.ಪಿ. ಸುಮಲತಾ ಸೇರಿ ಅನೇಕರಿದ್ದರು.