ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಫೆ. 27 ರಂದು ನಗರದಲ್ಲಿ ಹೆದ್ದಾರಿ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 27 ರಂದು ಮಂಗಳವಾರ ಚಾಮರಾಜನಗರದಿಂದ ಸಂತೇಮರಹಳ್ಳಿ ರಸ್ತೆಗೆ ಹೋಗುವ ರಸ್ತೆಯಲ್ಲಿರುವ ಜಾಲಹಳ್ಳಿ ಹುಂಡಿ ಬಳಿ ರಸ್ತೆ ತಡೆ ನಡೆಸಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಹೆದ್ದಾರಿ ಬಂದ್‌ಗೆ ಚಾಲನೆ ನೀಡಲಾಗುತ್ತದೆ ಎಂದರು.
ರೈತರ ಒತ್ತಾಯದಂತೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು, ರೈತ ವಿರೋಧಿ 3 ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು, ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು, ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಮತ್ತು ಇತರೆ ಎಲ್ಲ ಬೇಡಿಕೆಗಳು ಹಾಗೂ ಕಾರ್ಮಿಕರ ಹೋರಾಟವನ್ನು ಇತ್ಯರ್ಥಪಡಿಸಬೇಕು ಎಂದರು.ಪ್ರಾಕೃತಿಕ ವಿಕೋಪಗಳು ಮತ್ತು ಸರ್ಕಾರದ ನೀತಿಗಳಿಂದಾಗಿರುವ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ರೈತರಿಗೆ ಬ್ಯಾಂಕ್ಗಳ ಸಾಲ ಕಟ್ಟುವುದು ದುಸ್ತರವಾಗುತ್ತಿದೆ. ಹೀಗಿದ್ದರೂ ಇತ್ತೀಚೆಗೆ ರೈತರ ಸಾಲಮನ್ನಾ ವಿಚಾರವಾಗಿ ರಾಜಕೀಯ ಮಾಡುವ ಸರ್ಕಾರ ತನ್ನ ಧೋರಣೆ ಬಿಟ್ಟು ಕೂಡಲೇ ರಾಜ್ಯದ ಎಲ್ಲಾ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದರು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂ.ಎಸ್.ಪಿ.ಗೆ ಕಾಯ್ದೆಯನ್ನು ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಘೋಷಿಸಿರುವ ಬೆಲ್ಲದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕಡುಬೂರು ಮಾದೇಶ್, ನಾಗಣ್ಣ, ಮಹೇಶ್, ಷಣ್ಮುಖ ಸ್ವಾಮಿ, ನಟರಾಜು, ಶರವಣ ಇದ್ದರು.