ಕೋಡಿಹಳ್ಳಿ ಬಂಧನಕ್ಕೆ ಹೆದ್ದಾರಿ ತಡೆ, ರೈತರು ವಶಕ್ಕೆ

KannadaprabhaNewsNetwork |  
Published : Sep 30, 2026, 01:45 AM IST
 ಕನಕವೃತ್ತದ ಸಮೀಪದ  ಡಿಎಚ್ ಓ ಕಚೇರಿ ಸಭಾಂಗಣದಲ್ಲಿ  ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ದಿಂದ  ಹಮ್ಮಿಕೊಂಡ ವಿಶ್ವ ಫಾರ್ಮಾಸಿಸ್ಟ್  ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಎಸ್.ದೇಸಾಯಿ  ಮಾತನಾಡಿದರು | Kannada Prabha

ಸಾರಾಂಶ

ದಾವಣಗೆರೆ ಜಿಪಂ ಕಚೇರಿ ಎದುರು ಎನ್ಎಚ್‌-48ರಲ್ಲಿ ಮಂಗಳವಾರ ಕೋಡಿಹಳ್ಳಿ ಚಂದ್ರಶೇಖರ ಬಂಧನ ಖಂಡಿಸಿ, ಬೇಷರತ್ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ ರೈತರನ್ನು ಪೊಲೀಸರು ಬಂಧಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವಂತೆ 2013ರಲ್ಲಿ 6 ಗಂಟೆ ಕಾಲ ಎಲ್ಲಾ ರೈಲು ತಡೆ ಮಾಡಿ ಹೋರಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ತಕ್ಷಣವೇ ಹುಬ್ಬಳ್ಳಿ ರೈಲ್ವೇ ಪೊಲೀಸರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ, ತಾಲೂಕು ಘಟಕದಿಂದ ನಗರದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ-48ನ್ನು ದಿಢೀರನೇ ಬಂದ್ ಮಾಡಿ ಪ್ರತಿಭಟಿಸಲಾಯಿತು.

ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಸಭೆ ನಡೆಸಿದ ನಂತರ ಜಿಪಂ ಕಚೇರಿ ಮುಂಭಾಗದ ಎನ್ಎಚ್‌-48ರಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ತಾಲೂಕು ಅಧ್ಯಕ್ಷ ಮಂಡಲೂರು ಎಚ್.ವಿ.ವಿಶ್ವನಾಥ ಇತರರ ನೇತೃತ್ವದಲ್ಲಿ ದಿಢೀರನೇ ಹೆದ್ದಾರಿ ತಡೆ ನಡೆಸುವ ಮೂಲಕ ಬಂಧಿತ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ಬೇಷರತ್ ಆಗಿ ಬಿಡುಗಡೆ

ಮಾಡುವಂತೆ ಒತ್ತಾಯಿಸಿ ಹೋರಾಟಕ್ಕಿಳಿದರು. ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಗಂಟೆಗಳ ನಂತರ ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, 2013ರಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈಲು ತಡೆ ಹೋರಾಟ ನಡೆಸಲಾಗಿತ್ತು.

ಹಳೆಯ ರೈಲು ತಡೆ ಹೋರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪತ್ರಿಕಾಗೋಷ್ಠಿ ಹಾಗೂ ದಾಸನಕೊಪ್ಪದಲ್ಲಿ ರೈತ ಹೋರಾಟಕ್ಕೆ ತೆರಳಿದ್ದ ಕೋಡಿಹಳ್ಳಿಯವರನ್ನು ಹುಬ್ಬಳ್ಳಿ ರೇಲ್ವೆ ಪೊಲೀಸರು ಬಂಧಿಸಿದ್ದು ಸರಿಯಲ್ಲ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ರೈತರು, ಹೋರಾಟಗಾರರ ಮೇಲಿನ ಎಲ್ಲಾ ಕೇಸ್ ಗಳನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿತ್ತು. ಹೋರಾಟಗಾರರ ಮೇಲಿನ ಎಲ್ಲಾ ಕೇಸ್ ಗಳನ್ನೂ ಸರ್ಕಾರ ಹಿಂಪಡೆಯಬೇಕು. ಅದೇ ರೀತಿ ಶಿರಸಿಯಲ್ಲಿ ಹುಬ್ಬಳ್ಳಿ ರೈಲ್ವೇ ಪೊಲೀಸರು ಬಂಧಿಸಿರುವ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಒಂದು ವೇಳೆ ಕೋಡಿಹಳ್ಳಿಯವರಿಗೆ ಬಿಡುಗಡೆ ಮಾಡದಿದ್ದರೆ ನಮ್ಮನ್ನೂ ಜೈಲಿಗೆ ಹಾಕಿ. ರಾಜ್ಯಾಧ್ಯಕ್ಷರ ಜೊತೆಗೆ ನಾವು ಜೈಲಿಗೆ ಹೋಗುತ್ತೇವೆ ಎಂದು ಅವರು ಹೇಳಿದರು.

ರೈತ ಪರ ಹೋರಾಟ ನಡೆಸಿದ್ದ ಕೋಡಿಹಳ್ಳಿ ಚಂದ್ರಶೇಖರರ ಹೋರಾಟವನ್ನು ಹತ್ತಿಕ್ಕಲು ಬಂಧಿಸುವ ಕೆಲಸ ನಡೆದಿದೆ. ಎಷ್ಟೇ ಕೇಸ್ ಹಾಕಿದರೂ, ಎಷ್ಟೇ ಸಲ ಬಂಧಿಸಿದರೂ ನಮ್ಮ ರೈತ ನಾಯಕರು, ರೈತರ ಹೋರಾಟ ನಿಲ್ಲುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್‌ಗ ಅವರನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ಸೆ.30ರಿಂದಲೇ ರಾಜ್ಯವ್ಯಾಪಿ ರಸ್ತೆ ತಡೆ, ಹೆದ್ದಾರಿ ತಡೆ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಲಾಗುವುದು. ಅದೆಷ್ಟು ರೈತರನ್ನು, ರೈತ ಮುಖಂಡರನ್ನು ಸರ್ಕಾರ ಅದೆಷ್ಟು ಸಲ ಬಂಧಿಸುತ್ತದೋ ನೋಡೋಣ ಎಂದು ಅವರು ಎಚ್ಚರಿಸಿದರು.

ರೈತರು ತಮ್ಮ ಜೀವನಾಧಾರವಾದ ನೀರು, ಕೃಷಿ, ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ರೈತರ ಹಕ್ಕುಗಳಿಗಾಗಿ ಶಾಂತಿಯುತವಾಗಿ, ಪ್ರಜಾಸತ್ತಾತ್ಮಕವಾಗಿ ದಶಕ ಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ.

ಉತ್ತರ ಕರ್ನಾಟಕದ ರೈತರ ಬಹು ದಶಕಗಳ ಬೇಡಿಕೆಯಾದ ಮಹಾದಾಯಿ ನೀರಾವರಿ ಯೋಜನೆ, ಕಳಸಾ-ಬಂಡೂರಿ ನೀರಿನ ವಿಚಾರದ ಹೋರಾಟಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರರನ್ನು ಬಂಧಿಸಿದ್ದು ಸರಿಯಲ್ಲ ಎಂದು ಅವರು ಹೇಳಿದರು.

ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ಎಚ್.ವಿ.ವಿಶ್ವನಾಥ ಮಾತನಾಡಿ, ಕೋಡಿಹಳ್ಳಿ ಚಂದ್ರಶೇಖರರನ್ನು ಬಂಧಿಸಿರುವುದು ರೈತ ಸಮುದಾಯದಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಮಹಾದಾಯಿ ನೀರು ಉತ್ತರ ಕರ್ನಾಟಕದ ರೈತರ ದೀರ್ಘ ಕಾಲದ ಬೇಡಿಕೆ. ಈ ವಿಚಾರದಲ್ಲಿ ರೈತರ ಪರ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದಿದ್ದನ್ನು ಅಪರಾಧವೆಂದು ಸರ್ಕಾರ ನೋಡಬಾರದು. ರೈತ ಹೋರಾಟವನ್ನು ಪ್ರಕರಣಗಳಾಗಿ ನೋಡುವುದಕ್ಕಿಂತ ಅದರ ಹಿಂದಿನ ರೈತರ ಹಕ್ಕು, ಹೋರಾಟದ ಹಿನ್ನೆಲೆ ಪರಿಗಣಿಸಬೇಕು ಎಂದರು.

13 ವರ್ಷಕ್ಕಿಂತ ಹಿಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಈಗ ಕೋಡಿಹಳ್ಳಿ ಚಂದ್ರಶೇಖರರನ್ನು ಬಂಧಿಸಿದ್ದು ರೈತ ಹೋರಾಟಗಾರರಲ್ಲಿ ಆತಂಕ ತಂದಿದೆ. ತಕ್ಷಣ ಸರ್ಕಾರ ಮಧ್ಯ ಪ್ರವೇಶ ಮಾಡಿ, ಕೋಡಿಹಳ್ಳಿಯವರನ್ನು ಬೇಷರತ್ ಬಿಡುಗಡೆ ಮಾಡಿಸಿ, ರೈತರ ಮೇಲಿನ ಎಲ್ಲಾ ಕೇಸ್‌ಗಳನ್ನು ಕೈಬಿಡಬೇಕು ಎಂದು ಮಂಡಲೂರು ವಿಶ್ವನಾಥ ಒತ್ತಾಯಿಸಿದರು.

ರೈತ ಮುಖಂಡರಾದ ಯಲೋದಹಳ್ಳಿ ಕಾಳೇಶ, ಕರೇಕಟ್ಟೆ ಖಲೀಂವುಲ್ಲಾ, ಜಿ.ಶ್ರೀನಿವಾಸ, ಆಂಜನೇಯ, ಟಿ.ಎಂ.ಚಂದ್ರಶೇಖರ, ನಾಗರಾಜ, ಎಂ.ಎಸ್.ಭೂಮೇಶ, ಕೆ.ಎಚ್.ಹಾಲೇಶ, ಎನ್.ಕರಿಬಸಪ್ಪ, ಎಂ.ಡಿ.ದೊಡ್ಡವೀರಪ್ಪ, ಎಚ್.ಶೇಖರಪ್ಪ, ವಿಜಯಕುಮಾರ, ರಂಗನಾಥ, ರವಿಕುಮಾರ, ಮಲ್ಲಪ್ಪ, ಗಂಗಾಧರ, ಶಿವರಾಜ, ಎಂ.ಜಿ.

ಲೇಪಾಕ್ಷಪ್ಪ, ಎಸ್.ಜೆ.ಕಲ್ಲೇಶ, ಸಿ.ಬಿ.ರುದ್ರೇಶ, ಮಲ್ಲಿಕಾರ್ಜುನ, ಎಚ್.ಆರ್.ರಂಗಸ್ವಾಮಿ, ಬಿ.ಹೇಮಂತ, ಎಂ.ಎಸ್.ಶಿವಕುಮಾರ, ಬಿ.ಕೆ.ವೆಂಕಟೇಶ, ಎನ್.ಆರ್. ರಂಗಸ್ವಾಮಿ, ಎಚ್.ಶಿವಮೂರ್ತಿ ಇದ್ದರು.

ಫೋಟೊ:29ಕೆಡಿವಿಜಿ

ದಾವಣಗೆರೆ ಜಿಪಂ ಕಚೇರಿ ಎದುರು ಎನ್ಎಚ್‌-48ರಲ್ಲಿ ಮಂಗಳವಾರ ಕೋಡಿಹಳ್ಳಿ ಚಂದ್ರಶೇಖರ ಬಂಧನ ಖಂಡಿಸಿ, ಬೇಷರತ್ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ