ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಅಣಕು ಶವಯಾತ್ರೆ

KannadaprabhaNewsNetwork |  
Published : Sep 30, 2026, 01:45 AM IST
29ಕೆಡಿವಿಜಿ1, 2-ದಾವಣಗೆರೆಯಲ್ಲಿ ಮಂಗಳವಾರ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‌, ಎಎನ್ಎಸ್‌ಯುಐ ಮುಖಂಡರು, ಕಾರ್ಯಕರ್ತರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಮಂಗಳವಾರ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‌, ಎಎನ್ಎಸ್‌ಯುಐ ಮುಖಂಡರು, ಕಾರ್ಯಕರ್ತರು.

-ಸ್ಮಾಲ್‌ ಕಿಕ್ಕರ್‌

ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರದ ಕೈಗೊಂಬೆಯಂತೆ ವರ್ತನೆ: ಅನಿತಾಬಾಯಿ ಆಕ್ರೋಶಕನ್ನಡಪ್ರಭ ವಾರ್ತೆ ದಾವಣಗೆರೆ

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ದೇಶಾದ್ಯಂತ ₹13 ಕೋಟಿ ಜನರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅಣಕು ಶವ ಯಾತ್ರೆ ಮೆರವಣಿಗೆ ಮೂಲಕ ಜಿಲ್ಲಾ ಯುವ ಕಾಂಗ್ರೆಸ್, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಹಾಗೂ ಎನ್ಎಸ್‌ಯುಐನಿಂದ ಜಿಲ್ಲಾಡಳಿತ ಭವನಕ್ಕೆ ಮಂಗಳವಾರ ಮುತ್ತಿಗೆ ಹಾಕಲಾಯಿತು.

ನಗರದ ಡಿಸಿ ಕಚೇರಿ ವೃತ್ತದ ಬಳಿಯಿಂದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ, ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಕೆಪಿಸಿಸಿ ರಾಜ್ಯ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಇತರರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ, ಅಣಕು ಶವಯಾತ್ರೆ ಮೂಲಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.

ಇದೇ ವೇಳೆ ಮಾತನಾಡಿದ ಅನಿತಾಬಾಯಿ ಮಾಲತೇಶ, ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ದೇಶಾದ್ಯಂತ ₹13 ಕೋಟಿಗೂ ಅಧಿಕ ಮತದಾರರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಪರ ಆಯೋಗ ಮತ್ತು ಆಯೋಗದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣರಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಮಾತನಾಡಿ, ರಾಜ್ಯದಲ್ಲಿ ₹1 ಕೋಟಿಗೂ ಅಧಿಕ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದು, ಇದು ಬಿಜೆಪಿಯ ಕುತಂತ್ರ ನೀತಿಯ ರಾಜಕಾರಣವಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರದ ಅಣತಿಯಂತೆ ಕುಣಿಯುತ್ತಾ, ಅರ್ಹ ಮತದಾರರನ್ನೂ ಪಟ್ಟಿಯಿಂದ ಕೈಬಿಡುವುದರ ಮೂಲಕ ಬಿಜೆಪಿಗೆ ಮುಂದಿನ ದಿನಗಳಿಗೆ ದಾರಿ ಮಾಡಿಕೊಡುತ್ತಿರುವುದು ಖಂಡನೀಯ. ಬಿಜೆಪಿ ಮುಖಂಡರು, ಕಾರ್ಯಕರ್ತರಂತೆ ವರ್ತಿಸುತ್ತಿರುವ ಆಯೋಗದ ಅಧಿಕಾರಿಗಳಿಗೆ ಯುವ ಕಾಂಗ್ರೆಸ್‌ನಿಂದ ಆರೆಸ್ಸೆಸ್‌ ಚಡ್ಡಿ ಹಾಗೂ ಶರ್ಟ್ ಅಂಚೆ ಮೂಲಕ ಕಳಿಸುತ್ತೇವೆ. ತಕ್ಷಣವೇ ಇಂತಹ ದುರಾಡಳಿತದ ಅಧಿಕಾರಿಗಳು ರಾಜೀನಾಮೆ ನೀಡಿ, ಬಿಜೆಪಿ ಸೇರಿಕೊಳ್ಳಲಿ ಎಂದು ಸಲಹೆ ನೀಡಿದರು.

ಎನ್ಎಸ್‌ಯುಐ ಅಧ್ಯಕ್ಷ ಅಲಿ ರೆಹಮತ್ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿಯನ್ನೇ ಅಲುಗಾಡಿಸುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈಗೊಂಬೆಯಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಏಕಪಕ್ಷೀಯ ನಿರ್ಧಾರ ಕೈಗೊಂಡು, ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ.

ಇಂತಹ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಕೆಳಗಿಳಿಸಬೇಕು. ಮತದಾರರ ಹೆಸರನ್ನು ಕೈಬಿಟ್ಟ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು, ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷೆ ಕೆ.ಪಿ.ರಾಜೇಶ್ವರಿ ಮಾತನಾಡಿ, ಎಸ್ಐಆರ್‌ ವಿಚಾರದಲ್ಲಿ ಬಿಎಲ್ಒಗಳು, ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳ ಪರಿಶ್ರಮಕ್ಕೆ ಬೆಲೆ ಕೊಡದ ಚುನಾವಣಾ ಅಧಿಕಾರಿಗಳು ಮತದಾರರ ಸಂವಿಧಾನಬದ್ಧ ಹಕ್ಕನ್ನೇ ಕಸಿದುಕೊಂಡು, ಮತದಾನದ ಹಕ್ಕನ್ನೇ ತೆಗೆದು ಹಾಕಿ, ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ₹13 ಕೋಟಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದನ್ನು ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಕೆಪಿಸಿಸಿ ರಾಜ್ಯ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ದೂಡಾ ಮಾಜಿ ಅಧ್ಯಕ್ಷ ಆಯೂಬ್ ಪೈಲ್ವಾನ್‌, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಉಮೇಶ, ತಕ್ಕಡಿ ಮಂಜುನಾಥ, ಶ್ರೀಕಾಂತ ಬಗರೆ, ಹುಲ್ಮನಿ ಗಣೇಶ, ಎಸ್.ಮಲ್ಲಿಕಾರ್ಜುನ, ಬಾಬುರಾವ್ ಸಾಳಂಕಿ, ನಂಜಾನಾಯ್ಕ, ಎಚ್.ಜೆ.ಮೈನುದ್ದೀನ್, ರಾಕೇಶ ಗಾಂಧಿ ನಗರ, ಮುಜಾಹಿದ್ ಪಾಶ, ಟಿ.ರಮೇಶ, ಹರೀಶ, ದಾದಾಪೀರ್, ರಾಘ‍ವೇಂದ್ರ ಶೆಟ್ಟಿ, ಮಂಜುಳಮ್ಮ, ವಾಣಿ ಬಕ್ಕೇಶ, ಸಲ್ಮಾ ಭಾನು, ಮಂಗಳಮ್ಮ, ಉಮಾಕುಮಾರಿ, ಪ್ರವೀಣ ಇತರರು ಪ್ರತಿಭಟನೆಯಲ್ಲಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ