ಬಸವರಾಜ ಸರೂರ
ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಸರ್ವಿಸ್ ರಸ್ತೆ ಹಾಗೂ ಅಂಡರ್ ಬ್ರಿಡ್ಜಗಳ ಅಸಮರ್ಪಕ ನಿರ್ವಹಣೆಯಿಂದ ತಾಲೂಕಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಸಮರ್ಪಕ ನಿರ್ವಹಣೆಯಿಂದ ಅಲ್ಲಲ್ಲಿ ಹದೆಗಟ್ಟ ಸರ್ವಿಸ್ ರಸ್ತೆಗಳಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿವೆ. ಸ್ವಲ್ಪ ಮಳೆಯಾದರೂ ಸಾಕು ಅಂಡರ್ ಬ್ರಿಡ್ಜನಲ್ಲಿ ನೀರು ತುಂಬಿಕೊಳ್ಳುತ್ತದೆ. ಸರ್ವಿಸ್ ರಸ್ತೆಯ ಅಕ್ಕಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ನಿಂತು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೆದ್ದಾರಿ-48ಕ್ಕೆ ಸಂಪರ್ಕ ಕಲ್ಪಿಸುವ ತಾಲೂಕಿನ ಹಲಗೇರಿ ರಸ್ತೆ, ಮಾಕನೂರು ರಸ್ತೆ, ಬೆನಕನಕೊಂಡ ರಸ್ತೆ, ಯರೇಕುಪ್ಪಿ ರಸ್ತೆ ಸೇರಿದಂತೆ ವಿವಿಧ ಭಾಗಗಳ ಸರ್ವಿಸ್ ರಸ್ತೆಗಳು ಹಾಗೂ ಅಂಡರ್ ಬ್ರಿಡ್ಜಗಳ ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಮತ್ತಷ್ಟು ಅಪಾಯಕಾರಿಯಾಗುತ್ತಿದೆ. ರಾಣಿಬೆನ್ನೂರು ತಾಲೂಕು ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದ ಗಮನ ಸೆಳೆದಿರುವ ಪ್ರದೇಶ. ಕೃಷ್ಣಮೃಗ ಅರಣ್ಯ ಧಾಮ, ಬೆಟ್ಟದ ಮಲ್ಲಪ್ಪ, ಐರಣಿ ಹೊಳೆಕ್ಷೇತ್ರ, ಚೌಡಯ್ಯದಾನಪುರ ಮುಕ್ತೇಶ್ವರ ದೇವಸ್ಥಾನ, ಅಂಬಿಗರ ಚೌಡಯ್ಯ ಪೀಠ, ದೇವರಗುಡ್ಡ, ಮೆಡ್ಲೇರಿ, ಮೈಲಾರ ಮುಂತಾದ ಹಲವು ಸ್ಥಳಗಳಿಗೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಾರೆ. ಆದರೆ ಪ್ರಮುಖ ಸಂಪರ್ಕ ರಸ್ತೆಗಳೇ ಹದಗೆಟ್ಟಿರುವುದು ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚಿಸಿ, ಹಾಳಾದ ರಸ್ತೆಗಳ ದುರಸ್ತಿಪಡಿಸಿ ಅಂಡರ್‌ಬ್ರಿಡ್ಜಗಳಲ್ಲಿ ಬೀದಿ ದೀಪ ಅಳವಡಿಸಬೇಕು. ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸಂಪರ್ಕ ಮಾರ್ಗಗಳೇ ಸುರಕ್ಷಿತವಾಗಿದ್ದಾಗ ಮಾತ್ರ ರಾಣಿಬೆನ್ನೂರು ತಾಲೂಕಿನ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅಂಡರ್ ಬಿಡ್ಜಗಳು ಸರಿಯಾದ ನಿರ್ವಹಣೆ ಇಲ್ಲದೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬೆನಕನಗೊಂಡ, ಹಳೇ ಮಾಗೋಡ ರಸ್ತೆ, ಯರೇಕುಪ್ಪಿ ರಸ್ತೆಯ ಅಂಡರ್ ಬ್ರಿಡ್ಜಗಳಲ್ಲಿ ಬೀದಿ ದೀಪಗಳಿಲ್ಲದೆ ಅಸುರಕ್ಷಿತ ವಾತಾವರಣವಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚಿ ಬೀದಿ ದೀಪ ಅಳವಡಿಸಬೇಕು ಎಂದು ರಾಣಿಬೆನ್ನೂರಿನ ಡಾ. ಗಿರೀಶ ಕೆಂಚಪ್ಪನವರ ಹೇಳಿದರು.