22ರಿಂದ ಚಿತ್ರದುರ್ಗದಿಂದ ರಾಜಧಾನಿಗೆ ಪಾದಯಾತ್ರೆ

KannadaprabhaNewsNetwork |  
Published : Mar 09, 2026, 01:15 AM IST
ಚಿತ್ರದುರ್ಗದಿಂದ  ಸ್ಟೇಟ್  ಡೆಸ್ಕ್ ಗೆ   | Kannada Prabha

ಸಾರಾಂಶ

ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಮಟ್ಟದ ಜನಾಂದೋಲನ ಸಭೆಯನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಉದ್ಯೋಗ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಕಡಿತ ಮಾಡುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಮಾ.22 ರಿಂದ ಚಿತ್ರದುರ್ಗ ದಿಂದ ಬೆಂಗಳೂರುಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ವಾಲ್ಮೀಕಿ ಭವನದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಜನಾಂದೋಲನ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಪರಿಶಿಷ್ಟರ ಸಮಾವೇಶ ನಡೆಸಿದ್ದ ಕಾಂಗ್ರೆಸ್ ಒಳ ಮೀಸಲಾತಿ ಜಾರಿ ಮಾಡುವ ಘೋಷಣೆ ಮಾಡಿತ್ತು. ಅದೇ ಮಾದರಿಯಲ್ಲಿ ಬಿಜೆಪಿ ಪರ್ಯಾಯ ಸಮಾವೇಶ ನಡೆಸುತ್ತಿದೆ. ಮಾಜಿ ಶಾಸಕ ಹಾಗೂ ಬಿಜಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಡುಚಿ ರಾಜೀವ್ ನಿರ್ಣಯ ಮಂಡಿಸಿದರು. 22ರಂದು ಚಿತ್ರದುರ್ಗಲ್ಲಿ ಒಂದು ಲಕ್ಷ ಜನರ ಸೇರಿಸಿ ಸಮಾವೇಶ ನಡೆಸಿ ನಂತರ ಪಾದಯಾತ್ರೆ ಆರಂಭಿಸಲಾಗುವುದು. ಈ ಪಾದಯಾತ್ರೆ 27 ರಂದು ಬೆಂಗಳೂರಿಗೆ ತಲುಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವರು. ಪಾದಯಾತ್ರೆ ಮೊದಲ ದಿನದಿಂದಲೇ ತೀವ್ರ ಬಿರುಸು ನೀಡಲಾಗುವುದು. ಕಾಂಗ್ರೆಸ್ ದ್ರೋಹವ ನೇರವಾಗಿ ರಾಜ್ಯದ ಪರಿಶಿಷ್ಟರಿಗೆ ಮನವರಿಕೆ ಮಾಡಿಕೊಡಲಾಗುವುದೆಂದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ನೆಹರೂ ಅವರಿಂದ ರಾಜೀವ್‌ ಗಾಂಧಿವರೆಗೆ ಮೀಸಲಾತಿ ವಿರೋಧ ನಿಲುವು ತಳೆಯಲಾಗಿದೆ. ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಕಾಣಿಸುತ್ತಿದ್ದಾರೆ. ದಲಿತರ ನಾಲಿಗೆ ಮೇಲೆ ಕಾಲಿಟ್ಟು ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ದಲಿತರನ್ನು ಗುಲಾಮರೆಂದು ಭಾವಿಸಿದ್ದಾರೆಂದು ದೂರಿದರು.

ಈ ಮೊದಲಿದ್ದ ಶೇ.56ರ ಮೀಸಲಾತಿ ಪ್ರಮಾಣವ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ನ್ಯಾಯಾಲಯದಲ್ಲಿ ಸಮರ್ಪಕವಾದ ಮಂಡಿಸದೆ ಶೇ.50ಕ್ಕೆ ಮೀಸಲಾತಿ ಇಳಿಸಿ ಉದ್ಯೋಗ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಭವಿಷ್ಯದ ಪೀಳಿಗೆಗೆ ಇದು ತೊಂದರೆಯಾಗಲಿದೆ. ಮೀಸಲಾತಿ ಹಕ್ಕು ಪುನರ್ ಪಡೆದುಕೊಳ್ಳುವ ಸಂಬಂಧ ಪಾದಯಾತ್ರೆ ನಡೆಸಿ ಹಕ್ಕು ಪ್ರತಿಪಾದನೆ ಮಾಡಲಾಗುವುದೆಂದು ಶ್ರೀರಾಮುಲು ಹೇಳಿದರು.

ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ಸಚಿವ ಎಚ್‌.ಸಿ.ಮಹಾದೇವಪ್ಪ ಬಾಯಿಬಿಟ್ಟರೆ ಬಾಬಾ ಸಾಹೇಬ್‌, ಸಂವಿಧಾನ ಎನ್ನುತ್ತಾರೆ. ಉದ್ಯೋಗ ನೀಡುವ ಈ ವೇಳೆ ಮೀಸಲಾತಿ ತಪ್ಪಿಸುವ ಕುತಂತ್ರ ಮಾಡಿದೆ. ಹಿಂದೆ ಬೊಮ್ಮಾಯಿ ಸರ್ಕಾರ ಸರ್ವ ಪಕ್ಷ ಸಭೆ ಕರೆದಾಗ ಸಮ್ಮತಿಸಿ ನಂಚಕ ಬಿಜೆಪಿ ಜಾರಿ ಮಾಡಿದ ಒಳಮೀಸಲಾತಿ ಸರಿಯಿಲ್ಲ ಎಂದು ಹೇಳಿದ್ದರು. ರಾಜ್ಯಪಾಲರಿಂದ ಅನುಮೋದನೆ ಪಡೆದು ಈಗ ಹಳೆಯ ಮೀಸಲಾತಿ ಅನ್ವಯ ನೇಮಕ ಎನ್ನುತ್ತಾರೆ. ಇದು ಮಾನಸಿಕ ಸ್ಥಿತಿ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಹೈಕೋರ್ಟ್‌ ಶೇ.56ರಷ್ಟು ಮೀಸಲಾತಿಗೆ ತಡೆಯಾಜ್ಞೆ ತಂದಾಗ ಇದರಿಂದ ಒಂದೂವರೆ ಕೋಟಿ ಪರಿಶಿಷ್ಟರಿಗೆ ಅನ್ಯಾಯ ಆಗುತ್ತದೆ. ಮೇಲ್ಮನವಿ ಹೋಗಬೇಕು ಎಂಬ ಆಲೋಚನೆಯೇ ಸಿದ್ದರಾಮಯ್ಯ ಅವರಿಗೆ ಬರಲಿಲ್ಲ. ಪರಿಶಿಷ್ಟರ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಿದ್ದಾರೆ. ಸತೀಶ್ ಜಾರಕಿಹೊಳೆಯಂತವರು ಸುಮ್ಮನಿರುವುದು ಅಚ್ಚರಿ ತಂದಿದೆ ಎಂದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಶೋಷಿತರ ಪರವಾಗಿ ಎಂದು ಹೇಳಿಕೊಳ್ಳುತ್ತಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ 42 ಸಾವಿರ ಕೋಟಿ ರು. ಎಸ್ಸಿಪಿ, ಟಿಎಸ್ಪಿ ಅನುದಾನವ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ. ಮೀಸಲಾತಿ ಎಂದರೆ ಹಾಸ್ಟೆಲ್ ತೆರೆದು ಸಮರ್ಥಿಸಿಕೊಳ್ಳುವುದಲ್ಲ. ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಸಮುದಾಯವ ಅಜ್ಞಾನಿಗಳೆಂದು ಭಾವಿಸಿದೆ. ಪರಿಶಿಷ್ಟರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಮಧ್ಯ ಕರ್ನಾಟಕದ ಜನತೆ ತೊಡೆ ತಟ್ಟಿದರೆ ಸರ್ಕಾರ ಇರುತ್ತೆ ಎಂಬ ಬಗ್ಗೆ ಗ್ಯಾರಂಟಿ ಇಲ್ಲವೆಂದರು.

ಶಾಸಕರಾದ ಎಂ.ಚಂದ್ರಪ್ಪ, ಹೇಮಲತ ನಾಯಕ್, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ರಾಜುಗೌಡ, ಎನ್.ಮಹೇಶ್‌, ಮುಖಂಡರಾದ ಬಂಗಾರು ಹನುಮಂತು, ಉಮೇಶ್‌ ಜಾಧವ್‌, ಬಸವರಾಜ ದಡೆಸೂಗುರು, ಉಮೇಶ್ ಕಾರಜೋಳ, ಸಿಮೆಂಟ್‌ ಮಂಜು, ವೈ.ಸಂಪಂಗಿ, ಬಳ್ಳಾರಿ ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಟಿಪ್ಪರ್‌
ಗಡಿನಾಡು ಬೆಳಗಾವಿ ಕನ್ನಡಿಗರ ದೊಡ್ಡ ಅಸ್ಮಿತೆ