- ಮುಖಂಡ ಮಹೇಶಪ್ಪ ಆಗ್ರಹ । ಅಂಬೇಡ್ಕರ್, ಸೇವಾಲಾಲ್ ಫೋಟೋಗಳಿಟ್ಟು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ಗ್ರಾಮದ ಗೋಮಾಳದಲ್ಲಿ ಮಲೇಬೆನ್ನೂರು ಪುರಸಭೆಗೆ ಮಂಜೂರಾದ ಘನತ್ಯಾಜ್ಯ ಘಟಕವನ್ನು ರದ್ದು ಮಾಡಲು ಆಗ್ರಹಿಸಿ ಸ್ಥಳೀಯ ಮಹಿಳೆಯರೊಂದಿಗೆ ಗ್ರಾಮಸ್ಥರು ಡಾ.ಅಂಬೇಡ್ಕರ್ ಮತ್ತು ಸಂತ ಸೇವಾಲಾಲ್ ಭಾವಚಿತ್ರವಿಟ್ಟು ಶುಕ್ರವಾರ ಉರಿ ಬಿಸಿಲಲ್ಲೂ ಪ್ರತಿಭಟನೆ ನಡೆಸಿದರು.ಮುಖಂಡ ಮಹೇಶಪ್ಪ ಮಾತನಾಡಿ, ಕೊಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ ೫೯ರಲ್ಲಿ ೨.೨೦ ಎಕರೆ ಜಮೀನನ್ನು ಜಿಲ್ಲಾಧಿಕಾರಿ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಮಂಜೂರು ಮಾಡಿದ್ದಾರೆ. ಇದರ ಸಮೀಪದಲ್ಲಿಯೇ ಆಂಜನೇಯ ಸ್ವಾಮಿ ದೇವಾಲಯವಿದೆ. ವರ್ಷಕ್ಕೊಮ್ಮೆ ಜಾತ್ರೆ, ಅನ್ನಪ್ರಸಾದವೂ ನಡೆಯುತ್ತದೆ. ಆದರೆ, ಸದರಿ ಘನತ್ಯಾಜ್ಯ ಘಟಕ ನಿರ್ಮಾಣದಿಂದ ದುರ್ವಾಸನೆ ಉಂಟಾಗಿ ದೇವಾಲಯ ಸುತ್ತಲ ವಾತಾವರಣ ಕಲುಷಿತಗೊಳ್ಳಲಿದೆ. ಅಲ್ಲದೇ, ಭಕ್ತರ ಪ್ರವೇಶಕ್ಕೂ ಕುಂದುಂಟಾಗಲಿದೆ ಎಂದರು.
ಈ ಹಿಂದಿನ ಜಿಲ್ಲಾಧಿಕಾರಿ ಗೋಮಾಳದಲ್ಲಿ ದನ, ಕುರಿಗಳ ಮಾತ್ರ ಮೇಯಿಸಬೇಕು ಎಂದು ಹೇಳಿದ್ದರು. ಆದರೆ, ಈಗ ತ್ಯಾಜ್ಯ ಘಟಕಕ್ಕೆ ಗೋಮಾಳ ಜಾಗ ಮಂಜೂರು ಮಾಡಿದ್ದಾರೆ. ಇಂಥ ನಡೆ ಏಕೆ? ಪ್ರತಿ ಜಿಲ್ಲಾಧಿಕಾರಿಗಳಿಗೂ ಬೇರೆ ಬೇರೆ ಕಾನೂನು ಇದೆಯಾ ಎಂದು ಪ್ರಶ್ನಿಸಿದರು.
ಪ್ರತಿಭಟನೆ ಬಳಿಕ ಮನವಿ ಸಲ್ಲಿಸಿದ ವೇಳೆ ಅಣ್ಣಪ್ಪ, ಶಾಂತಿಬಾಯಿ, ಕಮಲಿಬಾಯಿ, ಪವಿತ್ರಬಾಯಿ, ನೇತ್ರಾಬಾಯಿ, ಸವಿತಾಬಾಯಿ, ಪಾರಿಬಾಯಿ, ರಂಗನಾಥ, ರವಿ, ಸರೋಜಾಬಾಯಿ, ಮಂಜಾನಾಯ್ಕ್, ರೋಜಾಬಾಯಿ ಮತ್ತಿತರರು ಇದ್ದರು.
- - -
ಕೊಮಾರನಹಳ್ಳಿ ಗೋಮಾಳದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗ ನೀಡಿರುವುದನ್ನು ರದ್ದುಪಡಿಸಲು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.