)
-ವಿಶ್ವ ಹಿಂದು ಪರಿಷತ್ತಿನ ಜಂಟಿ ಪ್ರ.ಕಾರ್ಯದರ್ಶಿ ಮಾಹಿತಿ
ವಿಶ್ವದ ಹಿಂದು ಸಮಾಜದ ನಾಯಕರು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಒಂದೆಡೆ ಸೇರಿಸುವ ಉದ್ದೇಶದೊಂದಿಗೆ ಡಿ.18ರಿಂದ 20ರವರೆಗೆ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಶ್ವ ಹಿಂದು ಕಾಂಗ್ರೆಸ್ 2026ನ್ನು ಆಯೋಜಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದು ಕಾಂಗ್ರೆಸ್ 2026ಗೆ ವಿಶ್ವದ 60ಕ್ಕೂ ಹೆಚ್ಚಿನ ದೇಶಗಳಿಂದ 4500ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹಿಂದು ಸಮಾಜದ ನಾಯಕರು, ಚಿಂತಕರು, ಉದ್ಯಮಿಗಳು, ವೃತ್ತಿಪರರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಅನೇಕ ಕ್ಷೇತ್ರಗಳ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಹಿಂದು ಸಮಾಜದ ವರ್ತಮಾನ ಮತ್ತು ಭವಿಷ್ಯದ ಕುರಿತ ಚಿಂತನೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಸಮಾವೇಶವನ್ನು ಈ ಹಿಂದೆ 2014ರಲ್ಲಿ ನವದೆಹಲಿ, 2018ರಲ್ಲಿ ಅಮೆರಿಕಾದ ಶಿಕಾಗೋ ಮತ್ತು 2023ರಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಆಯೋಜಿಸಲಾಗಿತ್ತು ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ವಿಶ್ವ ಹಿಂದು ಕಾಂಗ್ರೆಸ್‌ನಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜತೆಗೆ ಮೂರು ದಿನಗಳ ಸಮಾವೇಶದಲ್ಲಿ 45ಕ್ಕೂ ಹೆಚ್ಚಿನ ವಿಚಾರಗೋಷ್ಠಿಗಳು ನಡೆಯಲಿದ್ದು, 150ಕ್ಕೂ ಹೆಚ್ಚಿನ ಗಣ್ಯರು ಮತ್ತು ವಿಷಯ ತಜ್ಞರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಆರ್ಥಿಕತೆ, ರಾಜಕೀಯ, ಶಿಕ್ಷಣ, ಯುವಶಕ್ತಿ, ಹಿಂದು ಸಂಘಟನೆಗಳು, ಮಹಿಳೆಯರು ಮತ್ತು ಮಾಧ್ಯಮ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಕುರಿತು ಸಮಗ್ರ ಚರ್ಚೆಗಳು ನಡೆಯಲಿದೆ ಎಂದು ವಿವರಿಸಿದರು.