ದರ ನಿಗದಿಯಲ್ಲಿ ಸಭೆ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಸ್ಫೋಟಗೊಂಡಿತು. ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಗೇಟ್ ಹಾರಿ ಒಳನುಗ್ಗಿ ಪ್ರತಿಭಟನೆ ನಡೆಸಿದರು.

ಹಾವೇರಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ಸೋಮವಾರ ರಾತ್ರಿವರೆಗೂ ಮುಂದುವರೆದಿದೆ. ದರ ನಿಗದಿಯಲ್ಲಿ ಸಭೆ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಸ್ಫೋಟಗೊಂಡಿತು. ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಗೇಟ್ ಹಾರಿ ಒಳನುಗ್ಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸಭೆಗೆ ಆಗಮಿಸಿದರು. ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರೈತ ಮುಖಂಡ ಚೂನಪ್ಪ ಪೂಜಾರಿ ಹಾಗೂ ಜಿಲ್ಲೆಯ ರೈತ ಮುಖಂಡರ ನೇತೃತ್ವದಲ್ಲಿ ದರ ನಿಗದಿ ಕುರಿತು ಮಹತ್ವದ ಚರ್ಚೆ ಮಧ್ಯಾಹ್ನದಿಂದ ರಾತ್ರಿವರೆಗೂ ನಡೆಯಿತು.

ಬೇರೆ ಜಿಲ್ಲೆಗಳಲ್ಲಿ ನೀಡಿದಂತೆ ನಮಗೂ ಪ್ರತಿ ಟನ್ ಕಬ್ಬಿಗೆ ₹ 3,600 ದರ ನೀಡಲೇಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ಸಮ್ಮತಿಸಲಿಲ್ಲ. ಜಿಎಂ ಶುಗರ್ಸ್ ಕಾರ್ಖಾನೆ ಪ್ರತಿ ಟನ್‌ಗೆ ₹ 3,100 ನೀಡುವುದಾಗಿ ತಿಳಿಸಿದರೆ, ವಿಐಎಂಪಿ ಕಾರ್ಖಾನೆ ₹3,150 ಅಂತಿಮ ದರ ಎಂದು ಘೋಷಿಸಿತು. ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಮಾಲೀಕರು ಸ್ಪಷ್ಟಪಡಿಸಿದರು. ಹೀಗಾಗಿ ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ದರದ ನಡುವೆ ಒಮ್ಮತ ಮೂಡದೆ ಸಭೆ ಕಗ್ಗಂಟಾಯಿತು.

ಸಭೆ ಮಧ್ಯಾಹ್ನದಿಂದ ಸಂಜೆವರೆಗೂ ನಡೆದರೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಜಮಾಯಿಸಿದರು. ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿ, ರೈತರಿಗಾಗಿ ಕಚೇರಿ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಲಾಯಿತು. ಪರಿಸ್ಥಿತಿ ಬಿಗಡಾಯಿಸುವ ಮುನ್ನೆಚ್ಚರಿಕೆಯಿಂದ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಗೇಟ್‌ಗೆ ಬೀಗ ಹಾಕಿದ್ದರು. ಆದರೂ ಆಕ್ರೋಶಗೊಂಡ ರೈತರು ಗೇಟ್ ಹಾರಿ ಕಚೇರಿ ಆವರಣ ಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ದೂಡಿ ಒಳನುಗ್ಗಲು ರೈತರು ಯತ್ನಿಸಿದರು. ಆದರೆ, ಪೊಲೀಸ್‌ ಸರ್ಪಗಾವಲು ಹಾಕಿ ಬಾಗಿಲು ಭದ್ರಗೊಳಿಸಿದರು. ಇದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತದ ಮುಂಭಾಗ ಹಾಗೂ ಹಿಂಭಾಗದ ಗೇಟ್‌ಗೆ ಟ್ರ್ಯಾಕ್ಟರ್‌ ನಿಲ್ಲಿಸಿ ಯಾವುದೇ ಅಧಿಕಾರಿಗಳು ಕಚೇರಿಯಿಂದ ಹೊರ ಹೋಗದಂತೆ ತಡೆದರು. ಪರಿಣಾಮ ರಾತ್ರಿಯಾದರೂ ಅಧಿಕಾರಿಗಳು, ಸಿಬ್ಬಂದಿ ಮನೆಗೆ ಹೋಗಲು ಪರದಾಡುವಂತಾಯಿತು. ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತರು ಮತ್ತು ಕಾರ್ಖಾನೆಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಚಿವರ ಸಮ್ಮುಖದಲ್ಲಿಯೂ ಒಮ್ಮತ ಮೂಡದಿರುವುದು ರೈತರ ಅಸಮಾಧಾನ ಮತ್ತಷ್ಟು ಹೆಚ್ಚಿಸಿತು.