Water for the Left Bank Canal: Welcome Move

ರಾಜ್ಯ ಸರ್ಕಾರದ ನಿರ್ಧಾರ ರೈತರ ಹೋರಾಟಕ್ಕೆ ಸಂದ ಜಯ: ನಿರುಪಾದಿ ಗೋಮರ್ಸಿ

ಸಿಂಧನೂರು: ರೈತ ಸಂಘಟನೆಗಳ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಹಾಗೂ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನ.28ರವರೆಗೆ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಗೆ 3200 ಕ್ಯುಸೆಕ್‌ನಂತೆ ನೀರು ಹರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ ಎಂದು ತುಂಗಭದ್ರಾ ರೈತ ಒಕ್ಕೂಟ ಹೋರಾಟ ಸಮಿತಿಯ ಸಂಚಾಲಕ ನಿರುಪಾದಿ ಕೆ.ಗೋಮರ್ಸಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಡಿ. 31ರವರೆಗೆ ಎಡದಂಡೆ ನಾಲೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಬೆಳೆಹಾನಿ ಹೊಂದಿದ ಪ್ರತಿ ಎಕರೆಗೆ ರು.50 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ತುಂಗಭದ್ರಾ ರೈತ ಒಕ್ಕೂಟ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ನ.16, 17ರಂದು ಉಪವಾಸ ಸತ್ಯಾಗ್ರಹ, 18ರಂದು ಸಿಂಧನೂರು ಬಂದ್ ಚಳವಳಿ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನ.28ರವರೆಗೆ ಎಡದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಿದೆ. ಇದರಿಂದ ಶೇ.80ರಷ್ಟು ಜೋಳ, ಭತ್ತದ ಬೆಳೆಗಳು ರಕ್ಷಣೆಯಾಗಿ ರೈತರಿಗೆ ನೆರವಾಗಲಿದೆ ಎಂದು ಹೇಳಿದರು.

ನೀರಿನ ಅಭಾವದಿಂದ ಬೆಳೆಹಾನಿಯಾದ ರೈತರ ಪ್ರತಿ ಎಕರೆಗೆ ರಾಜ್ಯ ಸರ್ಕಾರ ರು.50 ಸಾವಿರ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು ಸಭೆ ನಡೆಸಿ ಭತ್ತ ಕಟಾವ್ ಮಾಡುವ ಯಂತ್ರದ ದರವನ್ನು ನಿಗದಿ ಪಡಿಸಬೇಕು ಹಾಗೂ ಜೋಳದ ಕಲಬೆರಕೆ ಬೀಜಗಳನ್ನು ಪೂರೈಸಿದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆದಷ್ಟು ಶೀಘ್ರ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಹೋರಾಟ ಸಮಿತಿಯ ಮುಖಂಡರಾದ ನಾಗವೇಣಿ ಎಸ್.ಪಾಟೀಲ್, ಶಿವರಾಜ ಸಾಸಲಮರಿ, ನಾಗರಾಜ ಬಿಂಗಿ, ಯಂಕೋಬ, ಮಲ್ಲಿಕಾರ್ಜುನ ರೆಡ್ಡಿ, ಅಯ್ಯಪ್ಪ ನಾಯಕ ಬನ್ನಿಗನೂರು, ಗಿರಿಬಾಬು, ಅಜೀದ್, ಯಮನೂರಪ್ಪ, ಸೋಮನಾಥ ಉಪಸ್ಥಿತರಿದ್ದರು.