ಚನ್ನಗಿರಿ: ಪಟ್ಟಣದಲ್ಲಿ 8 ವರ್ಷಗಳಿಂದ ಹಿಂದೂ ಏಕತಾ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಂತೆಯೇ, ಸೆಪ್ಟೆಂಬರ್‌ನಲ್ಲಿ ಬರಲಿರುವ 9ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಗುರುವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಹಿಂದೂ ಸಮಾಜ ಬಾಂಧವರ ಪೂರ್ವಭಾವಿ ಸಭೆ ನಡೆಸಲಾಯಿತು.
ಗಣೇಶೋತ್ಸವ ಸಮಿತಿಗೆ ಶಾಸಕ ಬಸವರಾಜು ವಿ. ಶಿವಗಂಗಾ ಅಧ್ಯಕ್ಷರಾಗಿದ್ದಾರೆ. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಗೌರವ ಅಧ್ಯಕ್ಷರು. ಇವರ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಿ, ಗಣಪತಿ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಗುವುದು. ಗಣೇಶೋತ್ಸವದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುವುದು ಎಂದರು.
ಸಮಿತಿ ಖಜಾಂಚಿ ಸಿ.ನಾಗರಾಜ್ ಮಾತನಾಡಿ 2016ರಿಂದ ಹಿಂದೂ ಏಕತಾ ಗಣಪತಿ ಸೇವಾ ಸಮಿತಿಯನ್ನು ರಚಿಸಿಕೊಂಡು ಗಣಪತಿ ಉತ್ಸವ ನಡೆಸಲಾಗುತ್ತಿದೆ. ಎಲ್ಲ ಸಮಾಜದವರು ಸಹಾ ಒಂದೊಂದು ದಿನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ ಏಕತೆ ಮೆರೆದಿದ್ದಾರೆ . ಈ ಗಣಪತಿ ಉತ್ಸವವು ಅದ್ಧೂರಿಯಾಗಿ ನಡೆಯಲು ಸರ್ವರ ಸಹಕಾರ ಇರಬೇಕು ಎಂದರು.ಸಭೆಯಲ್ಲಿ ಪಟ್ಟಣದ ವಿವಿಧ ಸಮಾಜಗಳ ಪ್ರಮುಖರಾದ ರಾಜಶೇಖರಯ್ಯ, ರಾಮಚಂದ್ರ ಪ್ರಜಾಪತ್, ಬುಳ್ಳಿ ನಾಗರಾಜ್, ಕಾಫಿ ಪುಡಿ ಶಿವಾಜಿ ರಾವ್, ನಟರಾಜ ರಾಯ್ಕರ್, ಜಿತೇಂದ್ರ ಕಂಚುಗಾರ್, ಕೆಂಚಪ್ಪ, ನಿಂಗಪ್ಪ, ರವಿಕುಮಾರ್ ಸೇರಿದಂತೆ ವಿವಿಧ ಹಿಂದೂ ಸಮಾಜಗಳ ಪ್ರಮುಖರು ಹಾಜರಿದ್ದರು.