ಕನ್ನಡಪ್ರಭ ವಾರ್ತೆ ಮಡಿಕೇರಿ
ದೆಹಲಿ ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಬಾಂಬ್ ಸ್ಪೋಟ ಖಂಡಿಸಿ ಹಿಂದು ಜಾಗರಣ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿ, ಇಸ್ಲಾಮಿಕ್ ಭಯೋತ್ಪಾದನೆಯ ದೃಷ್ಟಿಯನ್ನು ಇಟ್ಟುಕೊಂಡು ಇಡೀ ದೇಶವನ್ನು ಇಸ್ಲಾಮೀಕರಣ ಮಾಡಲು ಮತಾಂಧರು ಮಾಡುತ್ತಿದ್ದಾರೆ. ಇದರ ಭಾಗವಾಗಿ ದೆಹಲಿಯ ಕೆಂಪುಕೋಟೆಯ ಬಳಿ ಭಯೋತ್ಪಾದಕ ಸಂಘಟನೆಯ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ದೇಶದ ಇತಿಹಾಸದುದ್ದಕ್ಕೂ ನಡೆದಿರುವ ದಾಳಿಗಳನ್ನು ನೋಡಿದರೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ಕಂಡು ಬರುತ್ತಿದೆ. ಇದಕ್ಕಾಗಿ ಇಸ್ಲಾಂ ಮೂಲಭೂತವಾದಿಗಳು ಬೇರೆ ಬೇರೆ ಹೆಸರುಗಳ ಮೂಲಕ ದೇಶದ ನಾನಾ ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿವೆ. ದೆಹಲಿಯ ಕೆಂಪುಕೋಟೆ ಬಳಿಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.ರಾಜಕೀಯಕ್ಕಾಗಿ ಹಿಂದೂ ಸಮಾಜವನ್ನು ಬಲಿಕೊಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಪ್ರೇರಣೆ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ಹಿಂದೂ ಸಂಘಟನೆ ಎಂದಿಗೂ ದೇಶದ್ರೋಹ ಕೆಲಸ ಮಾಡಿಲ್ಲ. ಆದರೆ, ಬಾಂಬ್ ಹಾಕಿ ದೇಶದ್ರೋಹ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲು ಮುಂದಾದರೇ, ಪೊಲೀಸ್ ಇಲಾಖೆ ಅನುಮತಿಯನ್ನು ನಿರಾಕರಿಸುತ್ತಿದೆ. ಇವೆಲ್ಲವನ್ನು ಗಮನಿಸಿದರೆ, ಸರ್ಕಾರ ತನ್ನ ಅಧಿಕಾರದ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಹಿಂದು ಜಾಗರಣ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಹಸಂಚಾಲಕರಾದ ಚೇತನ್, ಸುನಿಲ್, ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ವಕ್ತಾರರಾದ ಅರುಣ್ ಕುಮಾರ್, ತಳೂರು ಕಿಶೋರ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಪ್ರಮುಖರಾದ ಮನುಮಂಜುನಾಥ್, ಪಿ.ಎಂ.ರವಿ ಸೇರಿದಂತೆ ಇತರರಿದ್ದರು.