-60 ಸಾವಿರಕ್ಕೂ ಹೆಚ್ಚು ಜನರಿಂದ ಭಕ್ತಿ ಭಾವದ ಶೋಭಾಯಾತ್ರೆ ವೀಕ್ಷಣೆ । ಆಗಸದಲ್ಲಿ ರಂಗುರಂಗಿನ ಚಿತ್ತಾರ ಮೂಡಿಸಿದ ಬೆಳಕಿನ ಚಾಕಚಾಕ್ಯತೆ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳ, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಜೈಭವಾನಿ ದೇವಸ್ಥಾನ ಬಳಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿ ವಿಸರ್ಜನೆ ಅದ್ಧೂರಿ, ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ಜಂಟಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಈ ಅದ್ಧೂರಿ ಗಣೇಶ ಉತ್ಸವಕ್ಕೆ ಚಾಲನೆ ನೀಡಿದ್ದು, ಈ 22 ದಿನಗಳಲ್ಲಿ ಲಕ್ಷಾಂತರ ಜನರು ಗಣಪತಿ ದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ವಿಸರ್ಜನೆ ದಿನವಾದ ಶನಿವಾರ, ಯಾದಗಿರಿ ಸೇರಿದಂತೆ ಕಲಬುರಗಿ, ರಾಯಚೂರು, ವಿಜಯಪುರ, ಬೀದರ್, ತೆಲಂಗಾಣದ ನಾರಾಯಣಪೇಟ್, ಕೊಡಂಗಲ್ ಸೇರಿದಂತೆ ಅನೇಕ ಭಾಗಗಳಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ಶೋಭಾಯಾತ್ರೆ ಪಾಲ್ಗೊಂಡು, ಗಣೇಶ ವೈಭವ ಕಣ್ತುಂಬಿಕೊಂಡರು. ಮಧ್ಯಾಹ್ನದ ಮಹಾ ಮಂಗಳಾರತಿ ನಂತರ ಬೃಹತ್ ಕ್ರೇನ್ ಮೂಲಕ ವಿಗ್ರಹಗಳನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿರಿಸಿ, ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಹೈದರಾಬಾದಿನಿಂದ ವಿಶೇಷವಾಗಿ ತರಿಸಲಾಗಿದ್ದ 19 ಅಡಿ ಎತ್ತರದ ಗಣೇಶ ವಿಗ್ರಹ, ಧನಸ್ಸುಧಾರಿ ಶ್ರೀರಾಮಚಂದ್ರ ಹಾಗೂ ಎದೆ ಬಗೆದು ನಿಂತ ಹನುಮಾನ್ ಬೃಹತ್ ವಿಗ್ರಹಗಳು ಕಣ್ಮನ ಸೆಳದವು. ಖಡ್ಗಧಾರಿ ಶಿವಾಜಿ ಮಹಾರಾಜರ ವಿಗ್ರಹ ಜನಾಕರ್ಷಿಸಿತು. ದೆಹಲಿಯಿಂದ ಬಂದಿದ್ದ ಕಲಾತಂಡಗಳ ಅಘೋರಿಗಳ ರೂಪಕದ ನೃತ್ಯ ಪ್ರದರ್ಶನ ನೋಡುಗರ ಎದೆ ಝಲ್ಲೆನ್ನಿಸಿತ್ತು. ಉತ್ತರ ಪ್ರದೇಶ- ಹಿಮಾಲಯ ಭಾಗದಲ್ಲಿ ಕಾಣಸಿಗುವ ಅಘೋರಿಗಳ ರೂಪಕದ ಈ ಕಲಾತಂಡಗಳ ಪ್ರದರ್ಶನ ಭಾರಿ ಸಾವಿರಾರು ಜನರ ಅಚ್ಚರಿ ಮೂಡಿಸಿ, ಅನೇಕರು ಭಕ್ತಿಪರವಶರಾದರು.
ಪ್ರತಿದಿನ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರಭಕ್ತಿ ಪ್ರೇರೇಪಿಸುವ, ಬಿಂಬಿಸುವ ವಿವಿಧ ಚಟುವಟಿಕೆಗಳು ಜನಮನ ಸೂರೆಗೊಂಡಿದ್ದವು. ಭರತನಾಟ್ಯ, ಮಲ್ಲಗಂಬ ಪ್ರದರ್ಶನ, ರಂಗೋಲಿ ಸ್ಪರ್ಧೆ ಮುಂತಾದ ದಿನಂಪ್ರತಿ ಕಾರ್ಯಕ್ರಮಗಳು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧದವರನ್ನು ಭಕ್ತಿ ಭಾವದಲ್ಲಿ ತೇಲಿಸಿದ್ದವು. ದಿನವೊಂದಕ್ಕೆ ಆರೇಳು ಸಾವಿರ ಜನರು ಹಿಂದೂ ಮಹಾ ಗಣಪತಿ ದರುಶನಕ್ಕೆ ಆಗಮಿಸುತ್ತಿದ್ದರು. ಜಾತ್ರಾ ಮಹೋತ್ಸವದಂತೆ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು, ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
-
-
-
-
28ವೈಡಿಆರ್13 : ಯಾದಗಿರಿಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆಯ ಭವ್ಯ ಶೋಭಾಯಾತ್ರೆಯಲ್ಲಿ ರಂಗುರಂಗಿನ ಬೆಳಕಿನ ಚಿತ್ತಾರ, ಧ್ವನಿವರ್ಧಕಗಳಲ್ಲಿ ಝೇಂಕರಿಸಿದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಕಾರ್ಯಕರ್ತರು, ಭಕ್ತಗಣ.-
28ವೈಡಿಆರ್14 : ಯಾದಗಿರಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಸದಸ್ಯರ ತಂಡ ವಿಸರ್ಜನೆ ದಿನದಂದು ಕಂಡಿದ್ದು ಹೀಗೆ..-
28ವೈಡಿಆರ್15 : ಯಾದಗಿರಿ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಜನಮನ ಸೂರೆಗೊಂಡ ದೆಹಲಿ ಕಲಾತಂಡಗಳ ಪ್ರದರ್ಶನ.---ಪಾಯಿಂಟ್ಸ್---
-ಕಣ್ಮನ ಸೆಳೆದ ಮೆರವಣಿಗೆ- ಭೂಮಿ ಬಿರಿಯುವಂತೆ ಗರ್ಜಿಸಿದ ಧ್ವನಿ ವರ್ಧಕಗಳು
- ಮುಗಿಲು ಮುಟ್ಟಿದ ಜೈಕಾರಗಳ ಝೇಂಕಾರ- ದೆಹಲಿಯಿಂದ ಬಂದಿದ್ದ ಅಘೋರಿಗಳ ಕಲಾರೂಪಕಗಳ ಪ್ರದರ್ಶನ
-ಭಕ್ತಿಪರವಶರಾದ ಜನರು