ಕನ್ನಡಪ್ರಭ ವಾರ್ತೆ ಬಳ್ಳಾರಿ
ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಡಿಜೆ ಅಳವಡಿಕೆಗಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಯಾತ್ರೆ ವೇಳೆ ಎರಡು ಸ್ಪೀಕರ್ ಅಳವಡಿಕೆಗಾಗಿ ಮಾತ್ರ ಅನುಮತಿ ನೀಡಿದ್ದು, ಇದಕ್ಕಿಂತ ಹೆಚ್ಚು ಸ್ಪೀಕರ್ ಅಳವಡಿಕೆಗೆ ಅನುಮತಿಯಿಲ್ಲವೆಂದು ಪೊಲೀಸರು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಸಂಘಟಕರು, ಪೊಲೀಸರ ಜತೆ ವಾಗ್ವಾದಕ್ಕಿಳಿದರಲ್ಲದೆ ಡಿಜೆಗೆ ಅನುಮತಿ ನೀಡುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಪ್ರತಿಭಟನೆಗಿಳಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿದರಲ್ಲದೆ ಡಿಜೆ ಅನುಮತಿಗಾಗಿ ಸಂಘಟಕರೊಂದಿಗೆ ಪಟ್ಟು ಹಿಡಿದರು. ಕೊನೆಯಲ್ಲಿ ಪೊಲೀಸರು ಡಿಜೆಗೆ ಅನುಮತಿ ನೀಡಿದ ಬಳಿಕ ಶೋಭಾಯಾತ್ರೆ ಮುಂದುವರಿಯಿತು.
ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯನ್ನು ಏಳನೇ ದಿನದಂದು ಅದ್ಧೂರಿ ಶೋಭಾಯಾತ್ರೆಯೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯಗಳು, ಛದ್ಮ ವೇಷಧಾರಿಗಳು, ಕೋಲಾಟ ಸೇರಿದಂತೆ ನಾನಾ ಜನಪದ ಕಲಾತಂಡಗಳು ಕುಣಿದು ಕುಪ್ಪಳಿಸುವ ಮೂಲಕ ಮೆರವಣಿಗೆಗೆ ಮೆರಗು ತಂದವು. ಬಳಿಕೆ ಇದಕ್ಕೆ ಜತೆಯಾದ ಡಿಜೆ ಹಾಡುಗಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ನಗರದ ಗಡಗಿಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ ಮೂಲಕ ಮೆರವಣಿಗೆ ಸಾಗಿತು. ಶೋಭಾಯಾತ್ರೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.ಶ್ರೀರಾಮುಲು, ರೆಡ್ಡಿ ಭರ್ಜರಿ ಕುಣಿತ