ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಹಿಂದೂ ಮಹಾಸಭಾ ಗಣಪತಿ ಶೋಭಾಯಾತ್ರೆ

KannadaprabhaNewsNetwork |  
Published : Sep 27, 2026, 02:15 AM IST
ಹಗರಿಬೊಮ್ಮನಹಳ್ಳಿಯಲ್ಲಿ ಶುಕ್ರವಾರ ಹಿಂದೂ ಮಹಾಸಭಾ ಗಣಪತಿಯ ಶೋಭಾಯಾತ್ರೆಗೆ ಶಾಸಕ ನೇಮಿರಾಜ್ ನಾಯ್ಕ ಚಾಲನೆ ನೀಡಿದರು.  | Kannada Prabha

ಸಾರಾಂಶ

ರಾಮನಗರದ ರಥಬೀದಿಯಿಂದ ಶುರುವಾದ ಶೋಭಾಯಾತ್ರೆ ವಾಸವಿ ವೃತ್ತ, ಕೊಟ್ಟೂರು ವೃತ್ತ, ಬಳಸಿಕೊಂಡು ಬೈಪಾಸ್ ವೃತ್ತದ ಮೂಲಕ ಬಸವೇಶ್ವರ ಬಜಾರ ಉದ್ದಕ್ಕೂ ಸಂಚರಿಸಿ ಕೊನೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ತುಂಗಭದ್ರೆಯತ್ತ ತೆರಳಿ ಗಣಪತಿ ಮೂರ್ತಿ ವಿಸರ್ಜಿಸಲಾಯಿತು.

ಹಗರಿಬೊಮ್ಮನಹಳ್ಳಿ: ಪಟ್ಟಣದ ಪ್ರತಿಷ್ಠಿತ ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆಯ ಹಿನ್ನೆಲೆ ಶುಕ್ರವಾರ ನಡೆದ ಶೋಭಾಯಾತ್ರೆಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಜನವೋ ಜನ, ಕಿವಿಗಡಚಿಕ್ಕುವ ಡಿಜೆ ಅಬ್ಬರದ ಸದ್ದು, ಯುವಕರ ನೃತ್ಯೋನ್ಮಾದ ಮತ್ತು ಕಣ್ಣು ಕೋರೈಸುವ ಬೆಳಕಿನ ಚಿತ್ತಾರ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

ಇಲ್ಲಿನ ರಥಬೀದಿಯ ಪಾದಗಟ್ಟೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಸಕರಾದ ನೇಮಿರಾಜನಾಯ್ಕ ಚಾಲನೆ ನೀಡಿದರು. ಮಧ್ಯಾಹ್ನ ಪ್ರಾರಂಭವಾದ ಅದ್ಧೂರಿ ಶೋಭಾಯಾತ್ರೆ ತಡರಾತ್ರಿಯವರೆಗೂ ನಡೆಯಿತು.

ರಾಮನಗರದ ರಥಬೀದಿಯಿಂದ ಶುರುವಾದ ಶೋಭಾಯಾತ್ರೆ ವಾಸವಿ ವೃತ್ತ, ಕೊಟ್ಟೂರು ವೃತ್ತ, ಬಳಸಿಕೊಂಡು ಬೈಪಾಸ್ ವೃತ್ತದ ಮೂಲಕ ಬಸವೇಶ್ವರ ಬಜಾರ ಉದ್ದಕ್ಕೂ ಸಂಚರಿಸಿ ಕೊನೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ತುಂಗಭದ್ರೆಯತ್ತ ತೆರಳಿ ಗಣಪತಿ ಮೂರ್ತಿ ವಿಸರ್ಜಿಸಲಾಯಿತು.

ಹಣೆಯ ಮೇಲೆ ಕುಂಕುಮ, ಕೇಸರಿ ರುಮಾಲನ್ನು ಸುತ್ತಿಕೊಂಡಿದ್ದ ಯುವಕರು ಧಾರ್ಮಿಕ ಶ್ರೀಮಂತಿಕೆಯ ಮೂಲಕ ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದರು. ಶೋಭಾಯಾತ್ರೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಮೆರವಣಿಗೆಯಲ್ಲಿ ರಾಜ ಗಾಂಭೀರ್ಯದಿಂದ ಸಾಗುತ್ತಿದ್ದ ಹಿಂದೂ ಮಹಾಗಣಪತಿಯ ರಾಜವೈಭವ ಕಣ್ತುಂಬಿಕೊಂಡರು.

ಶಾಸಕರಾದ ನೇಮಿರಾಜ್ ನಾಯ್ಕ ಹಾಗೂ ಮಾಜಿ ಶಾಸಕ ಎಸ್.ಭೀಮಾನಾಯ್ಕ ಪರಸ್ಪರ ಸಂಯಮದಿಂದ ತಮ್ಮ ತಮ್ಮ ಬೆಂಬಲಿಗರೊಂದಿಗೆ ಶೋಭಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಮೆರವಣಿಗೆಯು ಯಾವುದೇ ವಿಘ್ನವಿಲ್ಲದೇ ಶಾಂತಿಯುತವಾಗಿ ಸಾಗಲು ಖುದ್ದು ಎಸ್ಪಿ ಜಾಹ್ನವಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯು ಪಟ್ಟಣದಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮೂಲಕ ಖಾಕಿ ಕಣ್ಗಾವಲು ವಹಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಡ್ಲಿಗಿಯ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮತ್ತು ಪಟ್ಟಣದ ವೃತ್ತ ನಿರೀಕ್ಷಕ ವಿಕಾಸ್ ಲಮಾಣಿ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ್‌ ಆಯೋಜಿಸಿದ್ದರು.

ಹಿರೇ ಹಡಗಲಿಯ ಹಾಲಶಂಕರ ಶ್ರೀಗಳು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ತಳವಾರ್ ರಾಘವೇಂದ್ರ, ಮರಿರಾಮಣ್ಣ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಸೊನ್ನದ ಗುರುಬಸವರಾಜ್, ತ್ಯಾವಣಿಗಿ ಕೊಟ್ರೇಶ್, ಉಪ್ಪಾರ ಬಾಳಪ್ಪ, ಚಿಂತ್ರಪಳ್ಳಿ ದೇವೇಂದ್ರಪ್ಪ, ಹಿಂದೂ ಮಹಾಸಭಾ ಗಣಪತಿ ಸಮಿತಿಯ ಚಂದ್ರಶೇಖರ್, ಕೊಟ್ರೇಶ್ ಶೆಟ್ಟರ್, ಉಪ್ಪಾರ ಅಶೋಕ್, ಜಿ.ಎಂ. ಜಗದೀಶ್, ಬುಕೆಟ್‌ಗಾರ್ ಗಂಗಣ್ಣ, ಎಚ್.ಕೊಟ್ರೇಶ್, ಕೆ.ಎಂ.ಶಿವಶಂಕರ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಸಂಭ್ರಮವಿರಬೇಕು: ಪ್ರೊ. ಕೃಷ್ಣಮೂರ್ತಿ
ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ